ಏಷ್ಯಾ ಕಾನೆಡರೇಷನ್ ಕಪ್ (ಎಎಫ್'ಸಿ) ಟೂರ್ನಿಯ ಇತಿಹಾಸದಲ್ಲಿಯೇ ಫೈನಲ್ ತಲುಪಿದ ಭಾರತದ ಮೊಟ್ಟಮೊದಲ ಪುಟ್ಬಾಲ್ ತಂಡವೆಂಬ ಗರಿಮೆಗೆ ಛೆಟ್ರಿ ಪಡೆ ಭಾಜನವಾಯಿತು. ಈ ಮೊದಲು ಈಸ್ಟ್ ಬೆಂಗಾಲ್ ಮತ್ತು ಡೆಂಪೊ ತಂಡಗಳು ಎಎಫ್'ಸಿ ಟೂರ್ನಿಯ ಸೆಮಿಫೈನಲ್ ತಲುಪಿದ್ದು ಬಿಟ್ಟರೆ ಭಾರತದ ಮಿಕ್ಕ ಯಾವ ಪುಟ್ಬಾಲ್ ಕ್ಲಬ್ ಕೂಡ ಈ ಸಾಧನೆ ಮಾಡಿರಲಿಲ್ಲ.
ಬೆಂಗಳೂರು(ಅ.19): ನಾಯಕನಾಗಿ ಮತ್ತೊಮ್ಮೆ ಅತ್ಯಪೂರ್ವ ಆಟವಾಡಿದ ಸುನೀಲ್ ಛೆಟ್ರಿ ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಯಾಗಿಸದೆ ಮಿಂಚಿನ ಸಂಚಲನ ಸೃಷ್ಟಿಸಿದ ಫಲವಾಗಿ, ಬೆಂಗಳೂರು ಪುಟ್ಬಾಲ್ ಕ್ಲಬ್ (ಬಿಎಫ್'ಸಿ) ಪ್ರವಾಸಿ ಜೊಹೊರ್ ದರುಲ್ ತಾಜಿಮ್ (ಜೆಟಿಡಿ) ತಂಡದ ವಿರುದ್ಧ ಮನೋಜ್ಞ ಗೆಲುವು ದಾಖಲಿಸಿತು.
ಇದರೊಂದಿಗೆ ಏಷ್ಯಾ ಕಾನೆಡರೇಷನ್ ಕಪ್ (ಎಎಫ್'ಸಿ) ಟೂರ್ನಿಯ ಇತಿಹಾಸದಲ್ಲಿಯೇ ಫೈನಲ್ ತಲುಪಿದ ಭಾರತದ ಮೊಟ್ಟಮೊದಲ ಪುಟ್ಬಾಲ್ ತಂಡವೆಂಬ ಗರಿಮೆಗೆ ಛೆಟ್ರಿ ಪಡೆ ಭಾಜನವಾಯಿತು. ಈ ಮೊದಲು ಈಸ್ಟ್ ಬೆಂಗಾಲ್ ಮತ್ತು ಡೆಂಪೊ ತಂಡಗಳು ಎಎಫ್'ಸಿ ಟೂರ್ನಿಯ ಸೆಮಿಫೈನಲ್ ತಲುಪಿದ್ದು ಬಿಟ್ಟರೆ ಭಾರತದ ಮಿಕ್ಕ ಯಾವ ಪುಟ್ಬಾಲ್ ಕ್ಲಬ್ ಕೂಡ ಈ ಸಾಧನೆ ಮಾಡಿರಲಿಲ್ಲ. ಇದೀಗ ನವೆಂಬರ್ 5ರಂದು ನಡೆಯಲಿರುವ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಇರಾಕ್ ಪುಟ್ಬಾಲ್ ತಂಡ ಅಲ್-ಕುವಾ ಅಲ್-ಜಾವಿಯಾ ವಿರುದ್ಧ ಐ-ಲೀಗ್ ಚಾಂಪಿಯನ್ನರು ಕಾದಾಡಲಿದ್ದಾರೆ.
ಆರಂಭಿಕ ಹಿನ್ನಡೆ
ಆಟ ಆರಂಭವಾದ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಇತ್ತಂಡಗಳ ಪೈಕಿ ಮೊದಲಿಗೆ ಗೋಲು ದಾಖಲಿಸಿದ್ದು ಜೆಟಿಡಿ ತಂಡವೇ. 11ನೇ ನಿಮಿಷದಲ್ಲಿ ನಾಯಕ ಸಫೀಕ್ ಆಕರ್ಷಕ ಹೆಡರ್ ಮೂಲಕ ದಾಖಲಿಸಿದ ಗೋಲು ಬಿಎಫ್'ಸಿ ಪಾಳೆಯದಲ್ಲಿ ತಲ್ಲಣದ ಸೃಷ್ಟಿಸಿತು. ಪ್ರತಿ ದಾಳಿಯನ್ನು ನಿರೀಕ್ಷಿಸಿದ್ದ ಜೆಟಿಡಿ ತನ್ನ ರಕ್ಷಣಾ ವ್ಯೆಹವನ್ನು ಬಲಿಷ್ಠವಾಗಿಸಿತು. ಪರಿಣಾಮ ಮೇಲಿಂದ ಮೇಲೆ ಗೋಲಿಗಾಗಿ ಯತ್ನಿಸಿದ ಬಿಎಫ್'ಸಿಗೆ ಗೋಲು ಗಳಿಕೆ ಸಾಧ್ಯವಾಗಲಿಲ್ಲ. ಒಂದೆಡೆ ಹೆಚ್ಚುತ್ತಿದ್ದ ಒತ್ತಡ ಇನ್ನೊಂದೆಡೆ, ಸಮಬಲ ಸಾಧಿಸದ ಬೇಗುದಿಯಲ್ಲೇ ಹೋರಾಟ ಮುಂದುವರೆಸಿದ ಬಿಎಫ್'ಸಿಗೆ ಆಪದ್ಬಾಂಧವನಾಗಿ ಪರಿಣಮಿಸಿದ್ದು ನಾಯಕ ಛೆಟ್ರಿ. 28ನೇ ನಿಮಿಷದಲ್ಲಿ ಛೆಟ್ರಿ ಗೋಲು ಹೊಡೆಯಲು ಯತ್ನಿಸಿದರೂ, ಅದು ವೈಡ್ ಆಗಿ ಕೈಕೊಟ್ಟಿತು.
ಮಿಂಚಿನ ಸಂಚಾರ
ಆದರೆ, ಛಲಬಿಡದೆ ಹೋರಾಟ ಮುಂದುವರೆಸಿದ ಬಿಎಫ್'ಸಿ ಮತ್ತೊಂದು ಅವಕಾಶ ಸೃಷ್ಟಿಸಿಕೊಳ್ಳಲು ಮುಂದಾಯಿತು. ಆಲ್ವಿನ್ ಜಾರ್ಜ್ ಹಾಗೂ ವಿನೀತ್ ಜತೆಗೂಡಿದ ಛೆಟ್ರಿ ಜೆಟಿಡಿಯ ಡಿ ಬಾಕ್ಸ್‌ಗೆ ಎಗ್ಗಿಲ್ಲದೆ ಸಾಗಿತಲ್ಲದೆ, ಎದುರಾಳಿ ಪಾಳೆಯದಲ್ಲಿ ಆತಂಕಿತರಾದರು. ಆದರೆ ಇದೇ ಸಮಯಕ್ಕೆ 36ನೇ ನಿಮಿಷದಲ್ಲಿ ಮತ್ತೆ ದಾಳಿಗಿಳಿದ ಜೆಟಿಡಿ ಕಪ್ತಾನ ಸಫೀಕ್ ತಿರುವಿನಲ್ಲಿ ನೀಡಿದ ಚೆಂಡನ್ನು ಹಿಡಿತಕ್ಕೆ ಪಡೆದರೂ, ಬಿಎಫ್'ಸಿಯ ಆಂಟೋನಿಯೋ ಅವರ ಗೋಲಿನ ಹವಣಿಕೆಯನ್ನು ಹೊಸಕಿಹಾಕಿದರು. ಇನ್ನೇನು ಪ್ರಥಮಾರ್ಧದ ಆಟದ ಮುಗಿವಿಗೆ ನಾಲ್ಕು ನಿಮಿಷಗಳಿವೆ ಎನ್ನುವಾಗ ಬಿಎಫ್'ಸಿಯ ಲಿಂಗ್ಡೊ ತಿರುವಿನಿಂದ ಕಿಕ್ ಮಾಡಿದ ಚೆಂಡನ್ನು 12 ಗಜಗಳ ಅಂತರದಿಂದ ಆಕರ್ಷಕ ಹೆಡರ್‌ನೊಂದಿಗೆ ಜೆಟಿಡಿ ಗೋಲುಪೆಟ್ಟಿಗೆಗೆ ನುಸುಳಿಸಿದ ಛೆಟ್ರಿ ಅಂತರವನ್ನು 1-1ಕ್ಕೆ ಸಮಗೊಳಿಸಿದರು.
ವಿರಾಮದ ನಂತರವೂ ಪ್ರಾಬಲ್ಯ
ಪ್ರಥಮಾರ್ಧದಲ್ಲಿ ಸಮಬಲ ಸಾಧಿಸಿದ ಹುರುಪಿನೊಂದಿಗೇ ಮೈದಾನಕ್ಕಿಳಿದ ಬಿಎಫ್'ಸಿ ಉತ್ತರಾರ್ಧದ ಆಟದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಮುಖ್ಯವಾಗಿ ಛೆಟ್ರಿ ದಾಖಲಿಸಿದ ಎರಡನೇ ಗೋಲು ಜೆಟಿಡಿ ತಂಡದಲ್ಲಿ ಒತ್ತಡ ತುಂಬಿತು. ಚೆಂಡನ್ನು ಹಿಡಿತಕ್ಕೆ ಪಡೆದು ಎದುರಾಳಿ ತಂಡದ ಡಿ ಬಾಕ್ಸ್‌ನೊಳಗೆ ದೌಡಾಯಿಸಿದ ಛೆಟ್ರಿ ಗೋಲುಪೆಟ್ಟಿಗೆಯನ್ನು ಗುರಿಯಾಗಿಸಿಕೊಂಡು ಬಾರಿಸಿದ ಚೆಂಡನ್ನು ಹಿಡಿಯಲು ಜೆಟಿಡಿ ಗೋಲ್‌ಕೀಪರ್ ಇಝಾಮ್ ವಿಫಲವಾದರು. ಪರಿಣಾಮ 2-1 ಮುನ್ನಡೆ ಸಾಧಿಸಿದ ಬಿಎಫ್'ಸಿ ನೆರೆದಿದ್ದ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತು. ಆನಂತರದ ಆಟದಲ್ಲಿ ಜೆಟಿಡಿ ಸಮಬಲಕ್ಕಾಗಿ ಹೋರಾಡಿದರೂ, ಛೆಟ್ರಿ ಪಡೆಯ ಅದ್ವಿತೀಯ ಆಕ್ರಮಣಕಾರಿ ಆಟದೆದುರು ಅದು ಮಂಕಾಯಿತು. ಈ ಮಧ್ಯೆ 75ನೇ ನಿಮಿಷದಲ್ಲಿ ಲಿಂಗ್ಡೋ ಬಾರಿಸಿದ ಫ್ರೀ ಕಿಕ್ ಅನ್ನು ಹೆಡರ್ ಗೋಲಾಗಿ ಪರಿವರ್ತಿಸಿದ ಜುವಾನ್ ಆಂಟೋನಿಯೊ ಬಿಎಫ್'ಸಿ ಗೆಲುವನ್ನು ಖಾತ್ರಿಪಡಿಸಿದರು.
