ಇಂದು ಬಿಎಫ್'ಸಿ-ಚೆನ್ನೈ ಫೈನಲ್ ಫೈಟ್; ಚೊಚ್ಚಲ ಕಪ್ ಗೆಲ್ಲುವ ವಿಶ್ವಾಸದಲ್ಲಿ ಚೆಟ್ರಿ ಪಡೆ

First Published 17, Mar 2018, 2:51 PM IST
Bengaluru to play Chennaiyin for the ISL title today
Highlights

ಈ ಆವೃತ್ತಿಯಲ್ಲಿ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದು, ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿವೆ. ಮೊದಲ ಬಾರಿ ಮುಖಾಮುಖಿಯಾದಾಗ ಚೆನ್ನೈ 2-1 ಗೋಲುಗಳಲ್ಲಿ ಗೆದ್ದರೆ, 2ನೇ ಪಂದ್ಯದಲ್ಲಿ ಬಿಎಫ್‌'ಸಿ 3-1 ಗೋಲುಗಳಿಂದ ಗೆದ್ದಿತ್ತು.

ಬೆಂಗಳೂರು(ಮಾ.17):  ಭಾರತದ ಶ್ರೇಷ್ಠ ಫುಟ್ಬಾಲ್ ಕ್ಲಬ್‌'ಗಳಲ್ಲಿ ಒಂದೆನಿಸಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ ಚೊಚ್ಚಲ ಪ್ರಯತ್ನದಲ್ಲೇ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ ಆಗಲು ಕಾತರಿಸುತ್ತಿದೆ. ಬೆಂಗಳೂರಿನ ಪ್ರಶಸ್ತಿ ದಾರಿಯಲ್ಲಿ ಚೆನ್ನೈಯನ್ ಎಫ್‌ಸಿ ಅಡ್ಡ ನಿಂತಿದ್ದು, ಇಂದು ನಡೆಯಲಿರುವ ಮೆಗಾ ಫೈನಲ್‌'ನಲ್ಲಿ ಗೋಲಿನ ಮಳೆ ಸುರಿಸಿ ಟ್ರೋಫಿ ಎತ್ತಿಹಿಡಿಯುವ ವಿಶ್ವಾಸದಲ್ಲಿ ಸುನಿಲ್ ಚೆಟ್ರಿ ತಂಡ ಇದೆ.

2 ಬಾರಿ ಐ-ಲೀಗ್, ಫೆಡರೇಷನ್ ಕಪ್ ಗೆದ್ದು ದಾಖಲೆ ಬರೆದಿದ್ದ ಬೆಂಗಳೂರು ತಂಡ, ತನ್ನ ಭದ್ರಕೋಟೆ ಕಂಠೀರವ ಕ್ರೀಡಾಂಗಣದಲ್ಲಿ ಫೈನಲ್ ಆಡಲಿರುವುದರಿಂದ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಈ ವರ್ಷ, ಐ-ಲೀಗ್‌'ನಿಂದ ಐಎಸ್'ಎಲ್‌'ಗೆ ಕಾಲಿಟ್ಟ ಬಳಿಕ, ಬಿಎಫ್‌'ಸಿ ಲೀಗ್ ಹಂತ ದಲ್ಲಿ ಆಡಿದ 18 ಪಂದ್ಯಗಳಲ್ಲಿ 13ರಲ್ಲಿ ಗೆಲುವು ಸಾಧಿಸಿ, 4 ಪಂದ್ಯ ಬಾಕಿ ಇರುವಂತೆಯೇ ಪ್ಲೇ-ಆಫ್‌ಗೆ ಪ್ರವೇಶ ಪಡೆದಿತ್ತು. ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದ ಚೆನ್ನೈಗಿಂತಲೂ ಬಿಎಫ್‌'ಸಿ 8 ಅಂಕ ಮುಂದಿತ್ತು.

ಬಿಎಫ್‌'ಸಿಗೆ ಚೆಟ್ರಿ, ಮಿಕು ಬಲ: ಪಂದ್ಯಾವಳಿಯಲ್ಲಿ ಬಿಎಫ್‌'ಸಿ ಫೈನಲ್‌'ಗೇರುವಲ್ಲಿ ನಾಯಕ ಸುನಿಲ್ ಚೆಟ್ರಿ ಹಾಗೂ ತಾರಾ ಸ್ಟ್ರೈಕರ್ ಮಿಕು ಪಾತ್ರ ಬಹಳ ದೊಡ್ಡದಿದೆ. ಈ ಇಬ್ಬರು ಸೇರಿ ಒಟ್ಟು 27 ಗೋಲುಗಳನ್ನು ಬಾರಿಸಿದ್ದಾರೆ. ಈ ಅಂಕಿ-ಅಂಶ ಎದುರಾಳಿ ರಕ್ಷಣಾ ಪಡೆಗೆ ನಡುಕ ಹುಟ್ಟಿಸದೆ ಇರಲು ಸಾಧ್ಯವಿಲ್ಲ. ಈ ಇಬ್ಬರ ಜತೆಗೆ ನಿಶು ಕುಮಾರ್, ಉದಾಂತ ಸಿಂಗ್ ಹಾಗೂ ಎರಿಕ್ ಪಾರ್ತಲು ಅತ್ಯುತ್ತಮ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಪ್ರಮುಖ ಡಿಫೆಂಡರ್ ಹರ್ಮನ್‌ಜೋತ್ ಖಾಬ್ರಾ ಗಾಯಗೊಂಡು ಹೊರಗುಳಿದಿದ್ದರೂ, ಆಲ್ಬರ್ಟ್ ರೋಕಾ ಮಾರ್ಗದರ್ಶನದ ತಂಡ ಬಲಿಷ್ಠ ಡಿಫೆಂಡರ್‌ಗಳನ್ನು ಹೊಂದಿದೆ. ಡೆಲ್ಗಾಡೊ, ಜಾನ್ಸನ್, ಜುವಾನನ್, ಲೆನ್ನಿ ರೋಡ್ರಿಗಾಸ್, ರಾಹುಲ್ ಭೇಕೆ ಹಾಗೂ ಶುಭಾಷಿಶ್ ಬೋಸ್‌ರಂತಹ ಡಿಫೆಂಡರ್‌'ಗಳನ್ನು ದಾಟಿ ಗೋಲು ಗಳಿಸುವುದು ಯಾವುದೇ ಎದುರಾಳಿಗಾದರೂ ಕಠಿಣ ಸವಾಲೇ ಸರಿ.

ಬಿಎಫ್‌ಸಿಯ ಗೋಡೆ ಗುರ್‌ಪ್ರೀತ್: ಅಗ್ರ ಸ್ಟ್ರೈಕರ್‌'ಗಳು, ಪರಿಣಾಮಕಾರಿ ಮಿಡ್‌'ಫೀಲ್ಡರ್ಸ್‌, ಬಲಿಷ್ಠ ಡಿಫೆಂಡರ್‌ಗಳ ಜತೆ ಬಿಎಫ್‌'ಸಿಗಿರುವ ಮತ್ತೊಂದು ದೊಡ್ಡ ಲಾಭವೆಂದರೆ ಗೋಲ್ ಕೀಪರ್ ಗುರ್‌ಪ್ರೀತ್ ಸಂಧು. ಭಾರತದ ನಂ.1 ಗೋಲ್ ಕೀಪರ್ ಎಂದೇ ಖ್ಯಾತಿ ಗಳಿಸಿರುವ ಗುರ್‌ಪ್ರೀತ್ ಈ ಆವೃತ್ತಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಬಿಎಫ್‌'ಸಿ 20 ಪಂದ್ಯಗಳಲ್ಲಿ ಕೇವಲ 17 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಈ ಪೈಕಿ 18 ಪಂದ್ಯಗಳಲ್ಲಿ ಆಡಿರುವ ಗುರ್‌ಪ್ರೀತ್ 7 ಪಂದ್ಯಗಳಲ್ಲಿ ಕ್ಲೀನ್ ಶೀಟ್ (ಒಂದೂ ಗೋಲು ಬಿಟ್ಟುಕೊಡದೆ ಇರುವುದು) ಪಡೆದುಕೊಂಡಿದ್ದಾರೆ. 2 ಗೋಲುಗಳ ನಡುವೆ 111.86 ನಿಮಿಷಗಳ ಅಂತರವನ್ನು ಕಾಯ್ದುಕೊಳ್ಳುವುದರೊಂದಿಗೆ ಈ ಆವೃತ್ತಿಯ ಗೋಲ್ಡನ್ ಗ್ಲೌ ಪ್ರಶಸ್ತಿಯ ರೇಸ್‌'ನಲ್ಲಿ ಮುಂಚೂಣಿಯಲ್ಲಿದ್ದಾರೆ.

2ನೇ ಪ್ರಶಸ್ತಿ ಮೇಲೆ ಚೆನ್ನೈ ಕಣ್ಣು: 2015ರ ಚಾಂಪಿಯನ್ ಚೆನ್ನೈಯನ್ ಎಫ್‌'ಸಿ, ಈ ಆವೃತ್ತಿಯಲ್ಲಿ ಸೆಮಿಫೈನಲ್ ತಲುಪಲಿದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ ಲೀಗ್ ಹಂತದ ಅಂತಿಮ ಘಟ್ಟದಲ್ಲಿ ಜಾದೂ ಪ್ರದರ್ಶಿಸಿದ ಚೆನ್ನೈ, ಸೆಮೀಸ್‌'ಗೆ ಅರ್ಹತೆ ಪಡೆದುಕೊಂಡಿತು. ಸೆಮೀಸ್‌'ನಲ್ಲಿ ಗೋವಾ ಎಫ್‌'ಸಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿ, ಬಿಎಫ್‌'ಸಿ ವಿರುದ್ಧ ಫೈನಲ್ ಸೆಣಸಾಟಕ್ಕೆ ಸಜ್ಜಾಗಿದೆ. ತಂಡ ಜೆಜೆ ಲಾಲ್ಪೆಕ್ಲುವಾ, ರಾಫೆಯಲ್ ಅಗುಸ್ಟೊ, ಕರಣ್‌'ಜಿತ್‌ರಂತಹ ಪ್ರಮುಖ ಆಟಗಾರರನ್ನು ನೆಚ್ಚಿಕೊಂಡಿದೆ.

ಸಮಬಲ ಪೈಪೋಟಿ

ಈ ಆವೃತ್ತಿಯಲ್ಲಿ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದು, ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿವೆ. ಮೊದಲ ಬಾರಿ ಮುಖಾಮುಖಿಯಾದಾಗ ಚೆನ್ನೈ 2-1 ಗೋಲುಗಳಲ್ಲಿ ಗೆದ್ದರೆ, 2ನೇ ಪಂದ್ಯದಲ್ಲಿ ಬಿಎಫ್‌'ಸಿ 3-1 ಗೋಲುಗಳಿಂದ ಗೆದ್ದಿತ್ತು.

ಪಂದ್ಯ ಆರಂಭ: ರಾತ್ರಿ 8ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2

loader