15 ವರ್ಷದ ಬೆಂಗಳೂರು ಬಾಲಕ ಪ್ರಣವ್ ಆನಂದ್ ಈಗ ಚೆಸ್ ಗ್ರ್ಯಾಂಡ್ ಮಾಸ್ಟರ್..!
15 ವರ್ಷದ ಪ್ರಣವ್ ಆನಂದ್ ಭಾರತದ 76ನೇ ಚೆಸ್ ಗ್ರ್ಯಾಂಡ್‌ಮಾಸ್ಟರ್
ಅಂಡರ್-16 ಮುಕ್ತ ವಿಭಾಗದಲ್ಲಿ ಪ್ರಣವ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ
ರ್ನಾಟಕದಿಂದ ಗ್ರ್ಯಾಂಡ್‌ಮಾಸ್ಟರ್ ಪಟ್ಟಅಲಂಕರಿಸಿದ 4ನೇ ಚೆಸ್ ಪಟು ಪ್ರಣವ್
ಚೆನ್ನೈ(ಸೆ.17): ಬೆಂಗಳೂರಿನ ಯುವ ಚೆಸ್ ತಾರೆ, 15 ವರ್ಷದ ಪ್ರಣವ್ ಆನಂದ್ ಭಾರತದ 76ನೇ ಚೆಸ್ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ರೊಮಾನಿಯಾದಲ್ಲಿ ನಡೆಯುತ್ತಿರುವ ವಿಶ್ವ ಕಿರಿಯರ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ 2500 ಎಲೋ ಅಂಕಗಳ ಗುರಿ ತಲುಪಿದ ಅವರು ಗ್ರ್ಯಾಂಡ್‌ಮಾಸ್ಟರ್ ಪಟ್ಟಅಲಂಕರಿಸಿದರು. ಬಳಿಕ ಕೂಟದ ಅಂಡರ್-16 ಮುಕ್ತ ವಿಭಾಗದಲ್ಲಿ ಪ್ರಣವ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಇತ್ತೀಚೆಗಷ್ಟೇ ಜುಲೈ ತಿಂಗಳಲ್ಲಿ ಸ್ವಿಜರ್‌ಲೆಂಡ್‌ನಲ್ಲಿ ನಡೆದ 55ನೇ ಬೀಲ್ ಚೆಸ್ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡಿದ್ದ ಪ್ರಣವ್, ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಳ್ಳಲು ಬೇಕಾಗಿದ್ದ 3ನೇ ಗ್ರ್ಯಾಂಡ್‌ಮಾಸ್ಟರ್ ನಾಮ್‌ರ್ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದರು. ಅದಕ್ಕೂ ಮೊದಲು ಅವರು ಈ ವರ್ಷ 2 ಗ್ರ್ಯಾಂಡ್‌ಮಾಸ್ಟರ್ ಟೂರ್ನಿಗಳಾದ ಸಿಟ್ಗೆಸ್ ಓಪನ್(ಜನವರಿ), ವೆಜೆರ್‌ಕೆಪ್ಸೊ ರೌಂಡ್ ರಾಬಿನ್(ಮಾರ್ಚ್)ನಲ್ಲಿ ಆಡಿದ್ದರು.
‘ಪ್ರಣವ್ ಉತ್ತಮ ಕೌಶಲ್ಯ ಹೊಂದಿರುವ ಚೆಸ್ ಪಟು. ಅವರಿಗೆ ಉತ್ತುಮ ಭವಿಷ್ಯವಿದೆ. ಕೋವಿಡ್ ಇಲ್ಲದಿದ್ದರೆ ಪ್ರಣವ್ 2 ವರ್ಷಗಳ ಮೊದಲೇ ಗ್ರ್ಯಾಂಡ್‌ಮಾಸ್ಟರ್ ಆಗುತ್ತಿದದರು’ ಎಂದು ಅವರ ಕೋಚ್ ವಿ.ಸರವಣನ್ ಪ್ರತಿಕ್ರಿಯಿಸಿದ್ದಾರೆ.
ಏನಿದು ಗ್ರ್ಯಾಂಡ್‌ಮಾಸ್ಟರ್? ಆಗುವುದು ಹೇಗೆ ?
ಇದು ವಿಶ್ವ ಚೆಸ್ ಫೆಡರೇಶನ್(ಫಿಡೆ) ನೀಡುವ ಗೌರವ. ಯಾವುದೇ ಚೆಸ್ ಆಟಗಾರ ಗ್ರ್ಯಾಂಡ್‌ಮಾಸ್ಟರ್ ಎನಿಸಿಕೊಳ್ಳಲು ಫಿಡೆ ಮಾನ್ಯತೆ ಪಡೆದ ಟೂರ್ನಿಗಳಲ್ಲಿ ಉತ್ತಮ ಸಾಧನೆ ತೋರಬೇಕು. ಕನಿಷ್ಠ 3 ಗ್ರ್ಯಾಂಡ್‌ಮಾಸ್ಟರ್ ಟೂರ್ನಿಗಳಲ್ಲಿ ಆಡಬೇಕು ಮತ್ತು ಎಲೋ ಅಂಕ ಪದ್ಧತಿಯಲ್ಲಿ ಕನಿಷ್ಠ 2500 ಅಂಕ ಗಳಿಸಬೇಕು. ಜೊತೆಗೆ ವಿಶ್ವ ಚಾಂಪಿಯನ್‌ಶಿಪ್, ಕಿರಿಯರ ವಿಶ್ವ ಕೂಟದಲ್ಲಿ ತೋರುವ ಪ್ರದರ್ಶನವೂ ಗ್ರ್ಯಾಂಡ್‌ಮಾಸ್ಟರ್ ಪಟ್ಟಕ್ಕೇರಲು ನೆರವಾಗುತ್ತದೆ.
ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಸರಳವಾಗಿ ಮದುವೆಯಾದ ಥಾಮಸ್ ಕಪ್ ಹೀರೋ ಎಚ್‌ಎಸ್ ಪ್ರಣಯ್!
ರಾಜ್ಯದ 4ನೇ ಗ್ರ್ಯಾಂಡ್‌ಮಾಸ್ಟರ್
ಪ್ರಣವ್ ಕರ್ನಾಟಕದಿಂದ ಗ್ರ್ಯಾಂಡ್‌ಮಾಸ್ಟರ್ ಪಟ್ಟಅಲಂಕರಿಸಿದ 4ನೇ ಚೆಸ್ ಪಟು. ಈ ಮೊದಲು ತೇಜ್ ಕುಮಾರ್(2017), ಸ್ಟ್ಯಾನಿ ಜಾರ್ಜ್ ಆಂಥೋನಿ(2018), ಗಿರೀಶ್ ಕೌಶಿಕ್(2019) ಗ್ರ್ಯಾಂಡ್‌ಮಾಸ್ಟರ್ ಆಗಿದ್ದರು. 5 ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್(1987) ಭಾರತದ ಮೊದಲ, ತಮಿಳುನಾಡಿದ ಡಿ.ಗುಕೇಶ್(12 ವರ್ಷ, 7 ತಿಂಗಳು) ಭಾರತದ ಅತ್ಯಂತ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಎನಿಸಿಕೊಂಡಿದ್ದಾರೆ.