ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಂತೆ ರಾಜ್ಯದ ಇತರೆ ಕ್ರೀಡಾಂಗಣಗಳಲ್ಲೂ ಹಸಿರು ಕ್ರಾಂತಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮುಂದಾಗಿದೆ.

ಬೆಂಗಳೂರು(ಮೇ.30) ವಿಶ್ವ ಮಟ್ಟದಲ್ಲಿ ಶ್ರೇಷ್ಠ ಕ್ರೀಡಾಂಗಣ ಎಂಬ ಪ್ರಶಂಸೆಗೆ ಪಾತ್ರರಾಗಿರುವ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಂತೆ ರಾಜ್ಯದ ಇತರೆ ಕ್ರೀಡಾಂಗಣಗಳಲ್ಲೂ ಹಸಿರು ಕ್ರಾಂತಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮುಂದಾಗಿದೆ. ಕ್ರೀಡಾಂಗಣದಲ್ಲಿ ಅಳವಡಿಸಿರುವ ಸೋಲಾರ್ ವ್ಯವಸ್ಥೆ, ನೀರು ನಿರ್ವಹಣೆ, ಕಸ ನಿರ್ವಹಣೆ, ಮಳೆ ನೀರು ಸಂಗ್ರಹಣೆಯಂತಹ ವ್ಯವಸ್ಥೆಗಳನ್ನು ಕೆಎಸ್‌ಸಿಎ ಅಡಿಯಲ್ಲಿ ಬರುವ 4 ಕ್ರೀಡಾಂಗಣದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 


ಮುಂದಿನ ದಿನಗಳಲ್ಲಿ ಮೊದಲ ಹಂತವಾಗಿ ಹುಬ್ಬಳ್ಳಿ, ಶಿವಮೊಗ್ಗ, ಬೆಳಗಾವಿ ಮತ್ತು ಆಲೂರು ಕ್ರೀಡಾಂಗಣಗಳಲ್ಲಿ ಈ ವ್ಯವಸ್ಥೆಯನ್ನು ತರಲಾಗುವುದು ಎಂದು ಕೆಎಸ್‌ಸಿಎ ಸಹಾಯಕ ಕಾರ್ಯದರ್ಶಿ ಸಂತೋಷ್ ಮೆನನ್ ಹೇಳಿದರು. ಕಾರ್ಯಗಾರಕ್ಕೆ ಭಾರೀ ಪ್ರತಿಕ್ರಿಯೆ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಿರುವ ಪರಿಸರ ಕಾಳಜಿಯ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಮಂಗಳವಾರ ನಡೆದ ಕಾರ್ಯಗಾರದಲ್ಲಿ 21 ರಾಜ್ಯ ಕ್ರಿಕೆಟ್ ಸಂಸ್ಥೆಗಳು, ಭಾರತ ಹಾಕಿ ಸಂಸ್ಥೆ, ಅಥ್ಲೆಟಿಕ್ಸ್, ಲಾನ್ ಟೆನಿಸ್, ಗಾಲ್ಫ್ ಕ್ಲಬ್‌ಗಳು ಸೇರಿದಂತೆ ಇತರೆ ಸಂಸ್ಥೆಗಳು ಪಾಲ್ಗೊಂಡಿದ್ದವು.