ಫೈನಲ್ ತಲುಪಲು ಈ ಲೆಗ್'ನಲ್ಲಿ ಕನಿಷ್ಠ 2 ಗೋಲು ಅಂತರದಿಂದ ಗೆಲ್ಲಬೇಕಿದ್ದ ಬೆಂಗಳೂರು ಎಫ್'ಸಿಗೆ ಅದೃಷ್ಟ ಕೈಹಿಡಿಯಲಿಲ್ಲ. ಇಸ್ತಿಕ್ಲೋಲ್ ಪರ ನೂರಿದ್ದಿನ್ ದಾವ್ರೊನೋವ್(2ನೇ ನಿಮಿಷ) ಮತ್ತು ಡಿಮಿಟ್ರಿ ಬಾರ್ಕೋವ್(56ನೇ ನಿಮಿಷ) ಗೋಲು ಗಳಿಸಿದರು. ಬೆಂಗಳೂರು ತಂಡದ ಪರ ರಾಹುಲ್ ಭೆಕೆ(24ನೇ ನಿಮಿಷ) ಮತ್ತು ಸುನೀಲ್ ಛೆಟ್ರಿ(65ನೇ ನಿಮಿಷ) ಗೋಲು ಹೊಡೆದರು.
ಬೆಂಗಳೂರು(ಅ. 19): ಕಳೆದ ಸೀಸನ್'ನಲ್ಲಿ ರನ್ನರ್'ಅಪ್ ಆಗಿದ್ದ ಬೆಂಗಳೂರು ಫುಟ್ಬಾಲ್ ಕ್ಲಬ್ ಈ ಬಾರಿ ಫೈನಲ್ ತಲುಪಲು ವಿಫಲವಾಗಿದೆ. ನಿನ್ನೆ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಇಂಟರ್'ಝೋನ್ ಫೈನಲ್'ನ 2ನೇ ಲೆಗ್ ಪಂದ್ಯದಲ್ಲಿ ತಜಕಿಸ್ತಾನದ ಇಸ್ತಿಕ್ಲೋಲ್ ವಿರುದ್ಧ 2-2 ಗೋಲುಗಳಿಂದ ಡ್ರಾ ಮಾಡಿಕೊಂಡಿತು. ಆದರೆ, ಮೊದಲನೇ ಲೆಗ್'ನಲ್ಲಿ ಒಂದು ಗೋಲಿನ ಅಂತರದಿಂದ ಸೋತಿದ್ದ ಬಿಎಫ್'ಸಿ ಒಟ್ಟಾರೆ 2-3 ಗೋಲುಗಳಿಂದ ಪರಾಭವಗೊಂಡಿತು.
ಫೈನಲ್ ತಲುಪಲು ಈ ಲೆಗ್'ನಲ್ಲಿ ಕನಿಷ್ಠ 2 ಗೋಲು ಅಂತರದಿಂದ ಗೆಲ್ಲಬೇಕಿದ್ದ ಬೆಂಗಳೂರು ಎಫ್'ಸಿಗೆ ಅದೃಷ್ಟ ಕೈಹಿಡಿಯಲಿಲ್ಲ. ಇಸ್ತಿಕ್ಲೋಲ್ ಪರ ನೂರಿದ್ದಿನ್ ದಾವ್ರೊನೋವ್(2ನೇ ನಿಮಿಷ) ಮತ್ತು ಡಿಮಿಟ್ರಿ ಬಾರ್ಕೋವ್(56ನೇ ನಿಮಿಷ) ಗೋಲು ಗಳಿಸಿದರು. ಬೆಂಗಳೂರು ತಂಡದ ಪರ ರಾಹುಲ್ ಭೆಕೆ(24ನೇ ನಿಮಿಷ) ಮತ್ತು ಸುನೀಲ್ ಛೆಟ್ರಿ(65ನೇ ನಿಮಿಷ) ಗೋಲು ಹೊಡೆದರು.
ದುರದೃಷ್ಟ:
ಪಂದ್ಯ ಶುರುವಾರ ಎರಡನೇ ನಿಮಿಷದಲ್ಲೇ ಬೆಂಗಳೂರಿಗೆ ದುರದೃಷ್ಟ ಕಾದಿತ್ತು. ಗೋಲ್'ಕೀಪರ್ ಸಂಧು ಮಾಡಿದ ಸಣ್ಣ ತಪ್ಪು ತಂಡಕ್ಕೆ ಹಿನ್ನಡೆ ತಂದುಕೊಟ್ಟಿತು. ದಾವ್ರೊನೋವ್ ಅವರು ಪೆನಾಲ್ಟಿ ಅವಕಾಶವನ್ನು ಕೈಚೆಲ್ಲಲಿಲ್ಲ. ಅದಾದ ಬಳಿಕ ಮೊದಲಾರ್ಧದ ಅವಧಿ ಮುಗಿಯುವ ಮುನ್ನವೇ ಹರ್ಮನ್'ಜ್ಯೋತ್ ಸಿಂಗ್ ಖಬ್ರಾ ಅವರು ರೆಡ್'ಕಾರ್ಡ್ ಪಡೆದು ಪಂದ್ಯದಿಂದ ಹೊರಗುಳಿಯಬೇಕಾಯಿತು. 10 ಆಟಗಾರರೊಂದಿಗೆ ಬೆಂಗಳೂರು ಎಫ್'ಸಿ ಹೋರಾಡಬೇಕಾಯಿತು. ಇಷ್ಟಾದರೂ ಎದೆಗುಂದದ ಬೆಂಗಳೂರಿಗರು ವೀರೋಚಿತ ಹೋರಾಟ ತೋರಿದರು. ಆದರೆ, ಗೋಲ್ ಮಾತ್ರ ಹರಿದುಬರಲಿಲ್ಲ.
56ನೇ ನಿಮಿಷದಲ್ಲಿ ಇಸ್ತಿಕ್'ಲೋಲ್ ಗೋಲು ಗಳಿಸಿ ಮತ್ತೊಮ್ಮೆ ಮುನ್ನಡೆ ಪಡೆಯಿತು. ಅಲ್ಲಿಗೆ ಬೆಂಗಳೂರಿಗರ ಮೇಲಿನ ಒತ್ತಡ ಇನ್ನೂ ಅಧಿಕವಾಯಿತು. ಸ್ಟಾರ್ ಆಟಗಾರ ಸುನೀಲ್ ಛೆಟ್ರಿ 65ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಸಮಬಲ ತಂದರಾದರೂ ಎರಡು ಗೋಲುಗಳ ಅಂತರದ ಗೆಲುವು ಬೆಂಗಳೂರಿಗೆ ಗಗನಕುಸುಮವಾಯಿತು.
ಹಾಲಿ ಚಾಂಪಿಯನ್ಸ್ ಜೊತೆ ಸೆಣಸು:
ತಜಕಿಸ್ತಾನದ ಇಸ್ತಿಕ್ಲೋಲ್ ತಂಡವು ಈ ಗೆಲುವಿನೊಂದಿಗೆ ಫೈನಲ್ ತಲುಪಿದೆ. ನವೆಂಬರ್ 4ರಂದು ಹಾಲಿ ಚಾಂಪಿಯನ್ಸ್ ಇರಾಕ್'ನ ಏರ್'ಫೋರ್ಸ್ ಕ್ಲಬ್(ಅಲ್-ಖುವಾ ಅಲ್-ಜವಿಯಾ) ತಂಡದ ವಿರುದ್ಧ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ. ಕಳೆದ ಸೀಸನ್'ನಲ್ಲಿ ಇದೇ ಏರ್'ಫೋರ್ಸ್ ಕ್ಲಬ್ ತಂಡವು ಫೈನಲ್'ನಲ್ಲಿ ಬೆಂಗಳೂರು ಎಫ್'ಸಿಯನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿ ಪಡೆದಿತ್ತು. ಈಗ ಸತತ 2ನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
ಐ-ಲೀಗ್ ಬದಲು ಐಎಸ್'ಎಲ್:
ಇನ್ನು, ನಾಲ್ಕು ವರ್ಷಗಳ ಹಿಂದೆ ಜನ್ಮತಾಳಿದ ಬೆಂಗಳೂರು ಎಫ್'ಸಿ ತಂಡವು 4 ಬಾರಿ ಐ-ಲೀಗ್'ನಲ್ಲಿ ಸ್ಪರ್ಧಿಸಿದೆ. ಅದರ ಪೈಕಿ ಎರಡು ಬಾರಿ ಚಾಂಪಿಯನ್ ಆದರೆ, ಒಂದು ಬಾರಿ ರನ್ನರ್'ಅಪ್ ಆಗಿದೆ. ಮುಂಬರುವ ಋತುವಿನಲ್ಲಿ ಐ-ಲೀಗ್ ಬದಲು ಇಂಡಿಯನ್ ಸೂಪರ್ ಲೀಗ್'ನಲ್ಲಿ ಬೆಂಗಳೂರಿಗರು ಸೆಣಸಲಿದೆ.
