ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್ ಹಂತಕ್ಕೇರಿದ್ದ ಮುಂಬೈ ಸಿಟಿ, ಬಿಎಫ್‌'ಸಿ ಎದುರಿನ ಮೊದಲ ಪಂದ್ಯದಲ್ಲಿ ಜಯದ ಆರಂಭ ಪಡೆಯುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ.

ಬೆಂಗಳೂರು(ನ.19): ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ತನ್ನ ಚೊಚ್ಚಲ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಎಫ್‌'ಸಿ ತಂಡ, ಮುಂಬೈ ಸಿಟಿ ಎಫ್‌'ಸಿ ಎದುರು ಸೆಣಸಲಿದೆ.

ಇದರೊಂದಿಗೆ 4ನೇ ಆವೃತ್ತಿಯ ಇಂಡಿಯನ್ ಸೂಪರ ಲೀಗ್ (ಐಎಸ್‌ಎಲ್) ಪಂದ್ಯಾವಳಿಯಲ್ಲಿ ತನ್ನ ಅಭಿಯಾನವನ್ನು ಬಿಎಫ್‌'ಸಿ ಆರಂಭಿಸಲಿದೆ. ಐ-ಲೀಗ್‌'ನಿಂದ, ಐಎಸ್‌ಎಲ್‌'ಗೆ ಪದಾರ್ಪಣೆ ಮಾಡಿರುವ ಬಿಎಫ್‌'ಸಿ, ಭಾರತೀಯ ಫುಟ್ಬಾಲ್‌'ನಲ್ಲಿ ಅದ್ವಿತೀಯ ಸಾಧನೆ ಮೆರೆದಿದೆ. ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್ ಹಂತಕ್ಕೇರಿದ್ದ ಮುಂಬೈ ಸಿಟಿ, ಬಿಎಫ್‌'ಸಿ ಎದುರಿನ ಮೊದಲ ಪಂದ್ಯದಲ್ಲಿ ಜಯದ ಆರಂಭ ಪಡೆಯುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ.

ಎಎಫ್‌'ಸಿಯಲ್ಲಿ ಭಾಗವಹಿಸಿದ್ದರಿಂದ ಬಿಎಫ್‌'ಸಿ ತಂಡ, ಎಲ್ಲ ತಂಡಗಳಿಗೂ ಮುನ್ನವೇ ಕಠಿಣ ಅಭ್ಯಾಸದಲ್ಲಿ ನಿರತವಾಗಿತ್ತು. ಶನಿವಾರ ಕೂಡ ಬೆಂಗಳೂರು ಎಫ್‌'ಸಿ ತಂಡ, ಕಂಠೀರವ ಕ್ರೀಡಾಂಗಣದಲ್ಲಿ ಕೋಚ್ ಆಲ್ಬರ್ಟ್ ರೋಕಾ ಅವರ ಗರಡಿಯಲ್ಲಿ ಅಭ್ಯಾಸ ನಡೆಸಿತು. ನಾಯಕ ಸುನಿಲ್ ಚೆಟ್ರಿ, ಐಎಸ್‌ಎಲ್‌'ನ ತಮ್ಮ ಮಾಜಿ ತಂಡವಾದ ಮುಂಬೈ ಎಫ್‌'ಸಿ ಎದುರು ಮೊದಲ ಬಾರಿ ಕಣಕ್ಕಿಳಿಯುತ್ತಿದ್ದಾರೆ. ಬಿಎಫ್‌'ಸಿ ತಂಡದಲ್ಲಿ ಚೆಟ್ರಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇನ್ನೂ ಬ್ರಲಿಯೊ ನೊಬೆರ್ಗ್, ಎಡು ಗಾರ್ಸಿಯಾ, ಮಿಕು, ಡಿಫೆಂಡರ್ ಜಾನ್ ಜಾನ್ಸನ್ ಪ್ರಬಲ ಪೈಪೋಟಿ ನೀಡುವ ಉತ್ಸಾಹದಲ್ಲಿದ್ದಾರೆ.

ಇನ್ನೂ ಮುಂಬೈ ಪರ ಬಲ್ವಂತ್ ಸಿಂಗ್ ಫಾರ್ಮ್‌ನಲ್ಲಿದ್ದಾರೆ. ಎಲ್ಲ ವಿಭಾಗದಲ್ಲೂ ಉತ್ತಮ ಆಟಗಾರರಿರುವ ಮುಂಬೈ ತಂಡ, ಬಿಎಫ್‌ಸಿಗೆ ಪೈಪೋಟಿ ನೀಡಲು ಸಜ್ಜಾಗಿದೆ.