ಉಭಯ ತಂಡಗಳಿಗೆ ಮಹತ್ವವೆನಿಸಿದ್ದ ಈ ಪಂದ್ಯವನ್ನು ಗೆಲ್ಲಲೇ ಬೇಕೆಂಬ ಹಠದಲ್ಲಿ ಬುಲ್ಸ್ ಹಾಗೂ ಟೈಟಾನ್ಸ್ ತಂಡಗಳು ಕಣಕ್ಕಿಳಿದಿದ್ದವು.
ನಾಗ್ಪುರ(ಆ.08): ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಬುಲ್ಸ್ ಹಾಗೂ ತೆಲುಗು ಟೈಟಾನ್ಸ್ ನಡುವಿನ ಪಂದ್ಯವು ರೋಚಕ ಡ್ರಾದಲ್ಲಿ ಅಂತ್ಯ ಕಂಡಿದೆ.
ಬುಲ್ಸ್ ನಾಯಕ ರೋಹಿತ್ ಕುಮಾರ್ ಯಶಸ್ವಿ ರೈಡಿಂಗ್'ನ ಹೊರತಾಗಿಯೂ ದ್ವಿತಿಯಾರ್ಧದಲ್ಲಿ ತೆಲುಗು ಟೈಟಾನ್ಸ್ ತೋರಿದ ಚುರುಕಿನ ಆಟದ ನೆರವಿನಿಂದ 21-21 ಅಂಕಗಳ ಅಂತರದಲ್ಲಿ ಡ್ರಾನಲ್ಲಿ ಪಂದ್ಯ ಮುಕ್ತಾಯವಾಯಿತು.
ಉಭಯ ತಂಡಗಳಿಗೆ ಮಹತ್ವವೆನಿಸಿದ್ದ ಈ ಪಂದ್ಯವನ್ನು ಗೆಲ್ಲಲೇ ಬೇಕೆಂಬ ಹಠದಲ್ಲಿ ಬುಲ್ಸ್ ಹಾಗೂ ಟೈಟಾನ್ಸ್ ತಂಡಗಳು ಕಣಕ್ಕಿಳಿದಿದ್ದವು. ಮೊದಲಾರ್ಧ ಮುಕ್ತಾಯದ ವೇಳೆಗೆ ಬೆಂಗಳೂರು ಬುಲ್ಸ್ 9-8 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು.
ಎರಡು ತಂಡಗಳ ರಕ್ಷಣಕೋಟೆ ಸಾಕಷ್ಟು ಬಲಿಷ್ಠವಾಗಿದ್ದರಿಂದ ರೈಡರ್'ಗಳು ಒಂದೊಂದು ಅಂಕ ಕಲೆಹಾಕಲು ಸಾಕಷ್ಟು ಬೆವರು ಹರಿಸಬೇಕಾಯಿತು. ದ್ವಿತಿಯಾರ್ಧದ ಆರಂಭದಲ್ಲಿ 16-12 ಅಂಕಗಳ ಮುನ್ನಡೆ ಕಾಯ್ದುಕೊಂಡಿದ್ದು ಬುಲ್ಸ್ ಪಡೆ ಇನ್ನೇನು ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದೆ ಎನ್ನುವಾಗಲೇ ರಾಕೇಶ್ ಚೌಧರಿ ಪಡೆ ತಿರುಗೇಟು ನೀಡಲು ಪ್ರಯತ್ನಿಸಿತು. ಪಂದ್ಯ ಮುಕ್ತಾಯಕ್ಕೆ ಇನ್ನೇನು 3 ನಿಮಿಷಗಳಿದ್ದಾಗ ಬೆಂಗಳೂರು ಬುಲ್ಸ್ 20-15 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತ್ತು. ಈ ವೇಳೆ ಆಕ್ರಮಣಕಾರಿಯಾಟಕ್ಕೆ ಮುಂದಾದ ತೆಲುಗು ಟೈಟಾನ್ಸ್ 39ನೇ ನಿಮಿಷದಲ್ಲಿ 20-20 ಅಂಕಗಳ ಸಮಬಲ ಸಾಧಿಸಿತು. ಕೊನೆಯ ನಿಮಿಷದಲ್ಲಿ ಬುಲ್ಸ್ ಪರ ಆಶೀಶ್ ಕುಮಾರ್ ಒಂದಂಕ ತಂದುಕೊಟ್ಟರೆ, ಕೊನೆಯ ರೈಡ್'ನಲ್ಲಿ ರಾಹುಲ್ ಚೌಧರಿ ಟೈಟಾನ್ಸ್ ಪಡೆ ಕೊನೆಯ ಅಂಕ ತಂದು ಕೊಡುವ ಮೂಲಕ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ ಕಾಣಲು ಕಾರಣರಾದರು.
