ರಷ್ಯಾ(ಜೂ.23): ಫಿಫಾ ವಿಶ್ವಕಪ್ ಟೂರ್ನಿಯ ಬೆಲ್ಜಿಯಂ ಹಾಗೂ ತುನಿಷಿಯಾ ನಡುವಿನ ಪಂದ್ಯ ಅಭಿಮಾನಿಗಳಿಗೆ ಗೋಲಿನ ರಸದೌತಣ ನೀಡಿತು.  ರೋಚಕ ಹೋರಾಟದಲ್ಲಿ ಬೆಲ್ಜಿಯಂ 5 ಗೋಲು ಸಿಡಿಸಿದರೆ, ತುನಿಷಿಯಾ 2 ಗೋಲು ಬಾರಿಸಿತು. ಹೀಗಾಗಿ ಅಭಿಮಾನಿಗಳು 7 ಗೋಲುಗಳ ಸವಿಯುಂಡರು.

5-2 ಅಂತರದ ಭರ್ಜರಿ ಗೆಲುವಿನೊಂದಿಗೆ ಬೆಲ್ಜಿಯಂ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಪಂದ್ಯ ಆರಂಭಗೊಂಡ 6ನೇ ನಿಮಿಷದಲ್ಲೇ ಬೆಲ್ಜಿಯಂ ಪೆನಾಲ್ಟಿ ಅವಕಾಶವನ್ನ ಸದುಪಯೋಗ ಪಡಿಸಿಕೊಂಡಿತು. ಈಡನ್ ಹಜಾರ್ಡ್ ಸಿಡಿಸಿದ ಪೆನಾಲ್ಟಿ ಗೋಲಿನಿಂದ ಬೆಲ್ಜಿಯಂ 1-0 ಮುನ್ನಡೆ ಸಾಧಿಸಿತು.

16ನೇ ನಿಮಿಷದಲ್ಲಿ ರೋಮೇಲು ಲುಕಾಲು ಸಿಡಿಸಿ ಗೋಲಿನಿಂದ ಬೆಲ್ಜಿಯಂ 2-0  ಮುನ್ನಡೆ ಸಾಧಿಸಿತು. ಅಷ್ಟರಲ್ಲಿ ತುನಿಷಿಯಾ ಕೂಡ ಎಚ್ಚೆತ್ತುಕೊಂಡಿತು. 18ನೇ ನಿಮಿಷದಲ್ಲಿ ಮೊದಲ ಗೋಲು ಸಿಡಿಸೋ ಮೂಲಕ ಹಿನ್ನಡೆ ಅಂತರವನ್ನ ಕಡಿಮೆಗೊಳಿಸಿತು. ಮೊದಲಾರ್ಧದ ಅಂತಿಮ ಕ್ಷಣದಲ್ಲಿ ರೋಮೇಲು ಲುಕಾಲು ಮತ್ತೊಂದು ಗೋಲು ಸಿಡಿಸಿದರು. ಈ ಮೂಲಕ ಫಸ್ಟ್ ಹಾಫ್ ಮುಕ್ತಾಯದ ವೇಳೆ ಬೆಲ್ಜಿಯಂ 3-1 ಮುನ್ನಡೆ ಕಾಯ್ದುಕೊಂಡಿತು. 

ದ್ವಿತಿಯಾರ್ಧದಲ್ಲಿ ಬೆಲ್ಜಿಯಂ ಅಬ್ಬರ ಮತ್ತಷ್ಟು ಹೆಚ್ಚಾಯಿತು. ಈಡನ್ ಹಜಾರ್ಡ್ 51 ನೇ ನಿಮಿಷದಲ್ಲಿನ ಗೋಲು ಬೆಲ್ಜಿಯಂ ಗೋಲಿನ ಅಂತರವನ್ನ 4-1ಕ್ಕೇರಿಸಿತು. 90ನೇ ನಿಮಿಷದಲ್ಲಿ ಬೆಲ್ಜಿಯಂನ ಮಿಕಿ ಬಟ್ಶುವಾಯಿ ಗೋಲು ಬಾರಿಸಿದರು. 1-5 ಹಿನ್ನಡೆಯಲ್ಲಿದ್ದ ತುನಿಷಿಯಾ 90+3ನೇ ನಿಮಿಷದಲ್ಲಿ ವಹ್ಬಿ ಖರ್ಜಿ ಗೋಲಿನಿಂದ ಸೋಲಿನ ಅಂತರವನ್ನ 2-5ಕ್ಕೆ ಇಳಿಸಿತು. 

ತುನಿಷಿಯಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಬೆಲ್ಜಿಯಂ ಮೈದಾನದಲ್ಲೇ ಸಂಭ್ರಮಾಚರಣೆ ಆರಂಭಿಸಿತು. ಇತ್ತ ಅಭಿಮಾನಿಗಳು ಬರೋಬ್ಬರಿ 7  ಗೋಲಿನ ಅಮಲಿನಲ್ಲಿ ತೇಲಾಡಿದರು.