ಮುಂಬೈ(ನ.01): ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಅಂತಿಮ ಘಟ್ಟದಲ್ಲಿರುವಾಗಲೇ ಬಿಸಿಸಿಐ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಿದ್ಧತೆ ಆರಂಭಿಸಿದೆ. ಇನ್ನೆರಡು ವಾರದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಪ್ರವಾಸಕ್ಕೂ ಮುನ್ನವೇ ಬಿಸಿಸಿಐ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದೆ.

ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಸುದೀರ್ಘಕಾಲ ತಂಗಲಿದೆ. ಈ ವೇಳೆ ಟೀಂ ಇಂಡಿಯಾ ಊಟದ ಮೆನುವಿನಲ್ಲಿ ದನದ ಮಾಂಸಾಹಾರ(ಬೀಫ್) ತೆಗೆದುಹಾಕಲು ಸೂಚಿಸಿದೆ. ಈ ಮೂಲಕ ವಿವಾದಿಂದ ದೂರ ಉಳಿಯಲು ಬಿಸಿಸಿಐ ನಿರ್ಧರಿಸಿದೆ.

ಬಿಸಿಸಿಐ ಈ ಮನವಿ ಮಾಡಲು ಕಾರಣವಿದೆ. ಕಳೆದ ಇಂಗ್ಲೆಂಡ್ ಪ್ರವಾಸದ ಲಾರ್ಡ್ಸ್ ಟೆಸ್ಟ್ ವೇಳೆ ಬಿಸಿಸಿಐ ಊಟದ ಮೆನು ಫೋಟೋವನ್ನ ಟ್ವೀಟ್ ಮಾಡಿತ್ತು. ಈ ಮೆನುವಿನಲ್ಲಿ ಬೀಫ್ ಪಾಸ್ಟಾ ಅನ್ನೋ ಖಾದ್ಯ ಕೂಡ ಒಳಗೊಂಡಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಇಷ್ಟೇ ಅಲ್ಲ, ಟೀಂ ಇಂಡಿಯಾ ಹೀನಾಯ ಸೋಲು ಕೂಡ ಅನುಭವಿಸಿತ್ತು.

ಇದೀಗ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನವೇ ಬಿಸಿಸಿಐ, ಟೀಂ ಇಂಡಿಯಾ ಊಟದಿಂದ ಬೀಫ್ ತೆಗೆದುಹಾಕುವಂತೆ ಸೂಚಿಸಿದೆ.  ನವೆಂಬರ್ 21 ರಿಂದ ಜನವರಿ 18 ವರೆಗೆ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಸರಣಿ ಆಡಲಿದೆ.