ಪದೇ ಪದೇ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಾ ಬಂದಿರುವ ಬಿಸಿಸಿಐ ವಿರುದ್ಧ ಲೋಧಾ ಸಮಿತಿ ಸಲ್ಲಿಸಿದ್ದ ಸ್ಥಿತಿ ವರದಿ ಕುರಿತ ಅರ್ಜಿ ವಿಚಾರಣೆ ಇಂದು ನಡೆಯಬೇಕಿತ್ತು. ಆದರೆ, ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರ ಅಲಭ್ಯತೆಯಿಂದಾಗಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಲ್ಪಟ್ಟಿತು.
ನವದೆಹಲಿ(ಡಿ.05): ಶಿಫಾರಸುಗಳ ಅನುಷ್ಠಾನದಲ್ಲಿ ಅಸಡ್ಡೆಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ದೇಶದ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪದಾಧಿಕಾರಿಗಳನ್ನು ವಜಾಗೊಳಿಸಬೇಕೆಂದು ನ್ಯಾ. ಲೋಧಾ ಸಮಿತಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಇದೇ 9ಕ್ಕೆ ಮುಂದೂಡಿದೆ.
ಪದೇ ಪದೇ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಾ ಬಂದಿರುವ ಬಿಸಿಸಿಐ ವಿರುದ್ಧ ಲೋಧಾ ಸಮಿತಿ ಸಲ್ಲಿಸಿದ್ದ ಸ್ಥಿತಿ ವರದಿ ಕುರಿತ ಅರ್ಜಿ ವಿಚಾರಣೆ ಇಂದು ನಡೆಯಬೇಕಿತ್ತು. ಆದರೆ, ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರ ಅಲಭ್ಯತೆಯಿಂದಾಗಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಲ್ಪಟ್ಟಿತು.
ನ್ಯಾ. ಲೋಧಾ ಸಮಿತಿ ಶಿಫಾರಸು ಅನುಷ್ಠಾನ ಕುರಿತ ವಿಚಾರಣೆಯಲ್ಲಿ ಅ.21ರಂದು ಮಧ್ಯಂತರ ತೀರ್ಪು ನೀಡಿರುವ ನ್ಯಾಯಾಲಯ, ರಾಜ್ಯ ಕ್ರಿಕೆಟ್ ಸಂಸ್ಥೆಗಳು ಲೋಧಾ ಸಮಿತಿ ಮಾಡಿರುವ ಶಿಫಾರಸುಗಳನ್ನು ಜಾರಿಗೆ ತರುತ್ತೇನೆಂದು ಲಿಖಿತ ಹೇಳಿಕೆ ನೀಡುವವರೆಗೂ ಅವುಗಳಿಗೆ ಹಣಕಾಸು ನೆರವು ನೀಡದಂತೆ ಸ್ಪಷ್ಟ ನಿರ್ದೇಶನ ನೀಡಿದೆ.
ಇನ್ನು, ಡಿ.2ರಂದು ನಡೆದಿದ್ದ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಮುಖ್ಯಸ್ಥರೊಂದಿಗಿನ ವಿಶೇಷ ಸಭೆಯಲ್ಲಿ ಬಿಸಿಸಿಐ ಲೋಧಾ ಸಮಿತಿ ಶಿಫಾರಸುಗಳಲ್ಲಿನ ಕೆಲವೊಂದು ಅಂಶಗಳನ್ನು ಅನುಷ್ಠಾನಕ್ಕೆ ತರಲಾಗದು ಎಂಬ ತನ್ನ ಪಟ್ಟನ್ನು ಸಡಿಲಿಸದಿರಲು ನಿರ್ಧರಿಸಿದೆ. ಹೀಗಾಗಿ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ನಡೆಯುವ ವಿಚಾರಣೆಯು ಬಿಸಿಸಿಐ ಪಾಲಿಗೆ ಮಹತ್ವದ್ದೆನಿಸಿದೆ.
ಕ್ರಿಕೆಟ್ ಅಧಿಕಾರಿಗಳಿಗೆ 70 ವರ್ಷಗಳ ಮಿತಿ ಹೇರಿಕೆ, ಅಧಿಕಾರಾವಧಿ ನಡುವಿನ ಮೂರು ವರ್ಷಗಳ ಕಡ್ಡಾಯ ಅಂತರ ಮತ್ತು ಒಂದು ರಾಜ್ಯಕ್ಕೆ ಒಂದೇ ಮತ ಎಂಬ ಅಂಶಗಳನ್ನು ಬಿಸಿಸಿಐ ವಿರೋಧಿಸುತ್ತಲೇ ಬಂದಿದೆ.