ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಜೊತೆ ವಿರಸದಿಂದಾಗಿ ಕಳೆದ ಜೂನ್'ನಲ್ಲಿ ಕುಂಬ್ಳೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ನವದೆಹಲಿ(ಅ.17): ಅನಿಲ್ ಕುಂಬ್ಳೆ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಬೌಲರ್. ಭಾರತದ ಪರ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೇಟ್ ಪಡೆದಿರುವ ದಾಖಲೆ ಇನ್ನು ಇವರ ಹೆಸರಿನಲ್ಲಿದೆ. ಬೇರೆ ಯಾವ ಟೀಂ ಇಂಡಿಯಾ ಬೌಲರ್ ಕೂಡ ಕುಂಬ್ಳೆ ದಾಖಲೆಯನ್ನು ಇನ್ನು ಮುರಿದಿಲ್ಲ. ಇವರು ಕನ್ನಡಿಗರೆಂಬುದು ರಾಜ್ಯಕ್ಕೂ ಹೆಮ್ಮೆ.

ಖ್ಯಾತ ಸ್ಪಿನ್ನರ್, ಟೀಂ ಇಂಡಿಯಾ ನಾಯಕ ಹಾಗೂ ಕೋಚ್ ಹುದ್ದೆ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದವರು. ಇಂತಹ ಮಹಾನ್ ಬೌಲರ್'ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂದು ಅವರ 47ನೇ ಹುಟ್ಟುಹಬ್ಬದ ದಿನದಂದು ಅವಮಾನ ಮಾಡಿದೆ. ನಾಯಕ, ಕೋಚ್ ಮುಂತಾದ ಹಲವು ಸ್ಥಾನ ಅಲಂಕರಿಸಿದ ಮಹಾನ್ ಬೌಲರ್'ನನ್ನು ಕೇವಲ ಮಾಜಿ ಬೌಲರ್ ಎಂದು ಸಂಬೋದಿಸಿ ಅವಮಾನಿಸಿದೆ.

ಅವರು ಟೀಂ ಇಂಡಿಯಾ'ಗೆ ನೀಡಿದ ಕೊಡುಗೆಗಳನ್ನು ಟ್ವಿಟರ್'ನಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ಬಿಸಿಸಿಐ 'ಮಾಜಿ ನಾಯಕ' ಎಂದಷ್ಟೆ ನಮೂದಿಸಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಜೊತೆ ವಿರಸದಿಂದಾಗಿ ಕಳೆದ ಜೂನ್'ನಲ್ಲಿ ಕುಂಬ್ಳೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಡಿಲೀಟ್ ಮಾಡಿ ತೇಪೆ ಹಚ್ಚಿದ ಮಂಡಳಿ

ಬಿಸಿಸಿಐನ ಈ ರೀತಿಯ ನಡವಳಿಕೆಯಿಂದ ಅಭಿಮಾನಿಗಳು ಸಿಟ್ಟಿಗೆದ್ದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಭಿಮಾನಿಗಳ ಸಿಟ್ಟು ತಾರಕಕ್ಕೆ ಏರಿದಾಗ ಕೆಲವೇ ನಿಮಿಷಗಳಲ್ಲಿ ಈ ಟ್ವೀಟ್'ಅನ್ನು ಡಿಲೀಟ್ ಮಾಡಿ ತೇಪೆ ಹಚ್ಚುವ ಸಲುವಾಗಿ ಮಾಜಿ ನಾಯಕ ಎಂದು ಸಂಬೋಧಿಸಿ ಮತ್ತೊಂದು ಟ್ವೀಟ್ ಮಾಡಿದೆ.

132 ಟೆಸ್ಟ್'ಗಳನ್ನು ಆಡಿರುವ ಮಾಜಿ ನಾಯಕ 619 ವಿಕೇಟ್'ಗಳನ್ನು ಪಡೆದಿದ್ದಾರೆ. ಅವರು ಪಾಕ್ ವಿರುದ್ಧ ಇನ್ನಿಂಗ್ಸ್ ಒಂದರಲ್ಲೇ 10 ವಿಕೇಟ್ ಪಡೆದಿರುವುದು ಯಾರು ಮರೆಯದ ದಾಖಲೆ. ಅದೇ ರೀತಿ 271 ಏಕದಿನ ಪಂದ್ಯಗಳನ್ನು ಆಡಿ 337 ವಿಕೇಟ್'ಗಳನ್ನು ಉರುಳಿಸಿದ್ದಾರೆ.

Scroll to load tweet…