ಮುಂಬೈ(ಸೆ.29): ಆಡಳಿತ ಸುಧಾರಣೆಗಾಗಿ ತಾನು ನೀಡಿದ್ದ ಶಿಫಾರಸುಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ನಡೆಯ ಬಗ್ಗೆ ಸುಪ್ರೀಂ ಕೋರ್ಟ್ನ ಗಮನಕ್ಕೆ ತಂದು, ಮಂಡಳಿಗೆ ಬಿಸಿ ಮುಟ್ಟಿಸಿರುವ ನ್ಯಾ. ಲೋಧಾ ಸಮಿತಿಯ ಶಿಫಾರಸು ಅನುಷ್ಠಾನದ ಕುರಿತಾಗಿ ಚರ್ಚಿಸಲು ಇಂದು ಬಿಸಿಸಿಐ ವಿಶೇಷ ಸಭೆ ಕರೆದಿದೆ.
ಮಂಡಳಿಯ ಪದಾಧಿಕಾರಿಗಳ, ಸದಸ್ಯರ ತುರ್ತು ಸಭೆಯಲ್ಲಿ ಲೋಧಾ ಸಮಿತಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಬೇಕೇ ಬೇಡವೇ ಎಂಬುದರ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಬಿಸಿಸಿಐ ನಿರ್ಧರಿಸಿದೆ.
ಇತ್ತೀಚೆಗೆ, ಬಿಸಿಸಿಐ ವಾರ್ಷಿಕ ಸಭೆ ನಡೆದಿದ್ದು ಅಲ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡಗಳ ಆಯ್ಕೆ ಸಮಿತಿಗಳಿಗೆ ನೂತನ ಸದಸ್ಯರನ್ನು ನೇಮಿಸಲಾಗಿತ್ತು. ಹಾಗೆ ಆಯ್ಕೆ ಸಮಿತಿಗಳನ್ನು ನೇಮಿಸುವ ವಿಚಾರದಲ್ಲಿ ನ್ಯಾ. ಲೋಧಾ ಸಮಿತಿಯು ನೀಡಿದ್ದ ಶಿಫಾರಸುಗಳನ್ನು ಬಿಸಿಸಿಐ ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಇದರ ವಿರುದ್ಧ ಸಿಟ್ಟಿಗೆದ್ದ ಸಮಿತಿಯು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಬಿಸಿಸಿಐ ಮನಸೋ ಇಚ್ಛೆ ವರ್ತನೆಯನ್ನು ಸರ್ವೋಚ್ಛ ನ್ಯಾಯಪೀಠದ ಗಮನಕ್ಕೆ ತಂದಿತ್ತು. ಹಾಗಾಗಿ, ಇದು, ಸೆ. 18ರಂದು ಲೋಧಾ ಸಮಿತಿ ಶಿಫಾರಸು ಅಳವಡಿಸಿಕೊಳ್ಳಬೇಕೆಂದು ತೀರ್ಪು ನೀಡಿದ್ದ ಸರ್ವೋಚ್ಛ ನ್ಯಾಯಾಲಯವು ಈ ಕೂಡಲೇ ಜಾರಿಗೊಳ್ಳುವಂತೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಪದಚ್ಯುತಿಗೊಳಿಸಬೇಕು ಹಾಗೂ ಇತ್ತೀಚೆಗೆ ಬಿಸಿಸಿಐ ಕೈಗೊಂಡಿರುವ ಎಲ್ಲಾ ನಿರ್ಧಾರಗಳನ್ನೂ ಅನೂರ್ಜಿತಗೊಳಿಸಬೇಕು ಎಂದು ಕೋರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬಿಸಿಸಿಗೆ ಛೀಮಾರಿ ಹಾಕಿತ್ತು. ಇದರಿಂದಾಗಿ, ಇನ್ನು ಮುಂದೆ ಹಿಂದೇಟು ಹಾಕದೇ ಲೋಧಾ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ಬಿಸಿಸಿಐ ಸಿಲುಕಿದೆ. ಹಾಗಾಗಿ, ಸೆ. 30ರಲ್ಲಿ ನಡೆಯಲಿರುವ ಮಂಡಳಿಯ ತುರ್ತು ಸಭೆ ಸಾಕಷ್ಟುಮಹತ್ವ ಪಡೆದುಕೊಂಡಿದೆ.
