ನವದೆಹಲಿ(ಡಿ.01): ಬಿಸಿಸಿಐ ಶುಕ್ರವಾರ ಭಾರತ ಮಹಿಳಾ ತಂಡದ ಪ್ರಧಾನ ಕೋಚ್‌ ಹುದ್ದೆಗೆ ಹೊಸದಾಜಿ ಅರ್ಜಿ ಆಹ್ವಾನಿಸಿದೆ. ಇದರೊಂದಿಗೆ ರಮೇಶ್‌ ಪೊವಾರ್‌ ಕೋಚ್‌ ಹುದ್ದೆಯನ್ನು ಕಳೆದುಕೊಂಡಂತಾಗಿದೆ. ಶುಕ್ರವಾರ ಅವರ ಗುತ್ತಿಗೆ ಅವಧಿ ಮುಕ್ತಾಯಗೊಂಡಿತು. ಗುತ್ತಿಗೆ ವಿಸ್ತರಣೆ ಮಾಡಲು ನಿರಾಕರಿಸಿದ ಬಿಸಿಸಿಐ, ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಿದರೂ ಅದನ್ನು ಪರಿಗಣಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಭಾರತ ಮಹಿಳಾ ತಂಡದಲ್ಲಿ ಭಿನ್ನಮತ ಸ್ಫೋಟ - ಶೀಘ್ರದಲ್ಲೇ ಮೇಜರ್ ಸರ್ಜರಿ!

ಹಿರಿಯ ಆಟಗಾರ್ತಿಯೊಂದಿಗೆ ಮನಸ್ತಾಪದ ಹಿನ್ನೆಲೆಯಲ್ಲಿ ತುಷಾರ್‌ ಅರೋಠೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆಗಸ್ಟ್‌ನಲ್ಲಿ ಪೊವಾರ್‌, ಭಾರತ ಮಹಿಳಾ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರು.

ಮಿಥಾಲಿ ಸಂಭಾಳಿಸೋದೇ ಕಷ್ಟ: ಪವಾರ್ ತಿರುಗೇಟು

ವಿಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಹಿರಿಯ ಆಟಗಾರ್ತಿ ಮಿಥಾಲಿ ರಾಜ್‌ ಹಾಗೂ ಕೋಚ್‌ ಪವಾರ್‌ ನಡುವೆ ಬಹಿರಂಗ ಕಿತ್ತಾಟ ನಡೆದಿತ್ತು. ತಂಡ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದ ಬಳಿಕ ವಿಂಡೀಸ್‌ನಲ್ಲಾದ ಘಟನೆಗಳು ಒಂದೊಂದೇ ಹೊರಬರಲು ಶುರುವಾಯಿತು. ಮಿಥಾಲಿ, ಪವಾರ್‌ ವಿರುದ್ಧ ಬಿಸಿಸಿಐಗೆ ಪತ್ರ ಬರೆದಿದ್ದರು. ಆ ಪತ್ರ ಮಾಧ್ಯಮಗಳಲ್ಲಿ ಬಿತ್ತರವಾದ ಬಳಿಕ ಪವಾರ್‌, ಮಿಥಾಲಿ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಗುರುವಾರವಷ್ಟೇ ಮಿಥಾಲಿ, ಟ್ವೀಟರ್‌ನಲ್ಲಿ ಬೇಸರ ತೋಡಿಕೊಂಡಿದ್ದರು. ಈ ಬೆಳವಣಿಗೆಗಳು ಬಿಸಿಸಿಐಗೆ ಭಾರೀ ಮುಜುಗರ ತಂದಿತ್ತು. ಹೀಗಾಗಿ ಪವಾರ್‌ರ ಗುತ್ತಿಗೆ ವಿಸ್ತರಿಸದಿರಲು ನಿರ್ಧರಿಸಿತು ಎನ್ನಲಾಗಿದೆ.

ನನ್ನ ಜೀವನದ ಕರಾಳ ದಿನ: ಮಿಥಾಲಿ ಬೇಸರ

ಡಿ.14 ಕೊನೆ ದಿನ: ಕೋಚ್‌ ಹುದ್ದೆ ಅಲಂಕರಿಸಲು ಇಚ್ಛಿಸುವವರು ಡಿ.14ರ ಸಂಜೆ 5ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಪರಿಶೀಲಿಸಲಿರುವ ಬಿಸಿಸಿಐ, ಸೂಕ್ತ ಅಭ್ಯರ್ಥಿಗಳನ್ನು ಡಿ.20ರಂದು ಮುಂಬೈನ ತನ್ನ ಪ್ರಧಾನ ಕಚೇರಿಯಲ್ಲಿ ಸಂದರ್ಶನ ನಡೆಸಲಿದೆ. ಜನವರಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ಪ್ರವಾಸಕ್ಕೆ ತೆರಳಲಿದ್ದು, ಆ ವೇಳೆಗೆ ಹೊಸ ಕೋಚ್‌ ನೇಮಕವಾಗಲಿದೆ ಎಂದು ಮೂಲಗಳು ತಿಳಿಸಿವೆ. ಕೋಚ್‌ ಹುದ್ದೆ ಪೂರ್ಣಾವಧಿ ಕೆಲಸವಾಗಿದ್ದು, 2 ವರ್ಷಗಳ ಅವಧಿಗೆ ಒಪ್ಪಂದಕ್ಕೆ ಸಹಿ ಹಾಕಬೇಕಿದೆ. ಅಭ್ಯರ್ಥಿಗಳಿಗೆ 60 ವರ್ಷಗಳ ವಯೋಮಿತಿ ಇದೆ. ಇದರ ಜತೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬಿಸಿಸಿಐ ಇನ್ನೂ ಕೆಲ ಷರತ್ತುಗಳನ್ನು ವಿಧಿಸಿದೆ.

ಅಧಿಕಾರ ಬಳಸಿ ತಂಡದಿಂದ ಹೊರದಬ್ಬಲಾಗಿದೆ-ಬಿಸಿಸಿಐಗೆ ಮಿಥಾಲಿ ಪತ್ರ!

ಮೂಡಿ, ಪ್ರಸಾದ್‌ ಹೆಸರು!:

ಭಾರತ ತಂಡದ ಕೋಚ್‌ ಹುದ್ದೆಗೆ ಈಗಾಗಲೇ ಅನುಭವಿಗಳಾದ ಟಾಮಿ ಮೂಡಿ, ವೆಂಕಟೇಶ್‌ ಪ್ರಸಾದ್‌, ಡೇವ್‌ ವಾಟ್ಮೋರ್‌ ಹೆಸರು ಕೇಳಿ ಬರುತ್ತಿದೆ. ಈ ಮೂವರು ಅರ್ಹ ಅಭ್ಯರ್ಥಿಗಳೆನಿಸಿದ್ದಾರೆ.

ಯಾರು ಅರ್ಜಿ ಹಾಕಬಹುದು?

* ಅಂ.ರಾ. ಕ್ರಿಕೆಟ್‌ನಲ್ಲಿ ಭಾರತ ಇಲ್ಲವೇ ಇನ್ನಿತರ ರಾಷ್ಟ್ರವನ್ನು ಪ್ರತಿನಿಧಿಸಿರಬೇಕು.

* 1 ವರ್ಷ ಅಂ.ರಾ. ತಂಡ ಇಲ್ಲವೇ 2 ಋುತು ಟಿ20 ಫ್ರಾಂಚೈಸಿಯ ಕೋಚ್‌ ಆಗಿರಬೇಕು.

* 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

* ಎನ್‌ಸಿಎ ಲೆವೆಲ್‌ 3 ಕೋಚಿಂಗ್‌ ಸರ್ಟಿಫಿಕೇಟ್‌ ಇಲ್ಲವೆ ಇನ್ನಿತರ ಸೂಕ್ತ ಅರ್ಹತೆ ಇರಬೇಕು.