ನವದೆಹಲಿ(ಅ.21): ಮುಂದಿನ ತಿಂಗಳು ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಡಿಆರ್'ಎಸ್(ಡಿಸೀಷನ್ ರಿವ್ಯೂ ಸಿಸ್ಟಮ್) ನಿಯಮವನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ಬಿಸಿಸಿಐ ತೀರ್ಮಾನಿಸಿದೆ. ಕ್ರಿಕೆಟ್ ಆಡುವ ಬಹುತೇಕ ರಾಷ್ಟ್ರಗಳು ಡಿಆರ್'ಎಸ್'ಗೆ ತಮ್ಮ ಒಪ್ಪಿಗೆ ಸೂಚಿಸಿದ್ದರೂ, ಬಿಸಿಸಿಐ ಮಾತ್ರ ವಿರೋಧಿಸುತ್ತಲೇ ಬಂದಿತ್ತು.

ಈ ಹಿಂದೆ ಬಿಸಿಸಿಐ ಹಾಗೂ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಡಿಆರ್'ಎಸ್ ಅಳವಡಿಸಿಕೊಳ್ಳಲು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿರುವ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಡಿಆರ್'ಎಸ್ ತಂತ್ರಜ್ಞಾನದ ಬಗ್ಗೆ ಮೃದು ಧೋರಣೆ ತಾಳಿರುವುದರಿಂದ ಬಿಸಿಸಿಐ ಇಂಗ್ಲೆಂಡ್ ವಿರುದ್ಧದ ಸರಣಿಗೆ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ಮುಂದಾಗಿದೆ. ನವೆಂಬರ್ 09 ರಿಂದ ಇಂಗ್ಲೆಂಡ್ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ.

ಇತ್ತೀಚೆಗೆ ಹಾಕ್ ಐನಲ್ಲಿ ಸುಧಾರಣೆ ತಂದಿರುವುದಾಗಿ ಪ್ರತಿಪಾದಿಸಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ), ಡಿಆರ್‌ಎಸ್ ಅಳವಡಿಕೆಗೆ ಬಿಸಿಸಿಐ ಮನವೊಲಿಸಲು ಪ್ರಯತ್ನಿಸಿತ್ತು. ಈ ಹಿನ್ನೆಲೆಯಲ್ಲಿ ಅ. 20ರಂದು ಬಿಸಿಸಿಐಗೆ ‘ಸುಧಾರಿತ ಡಿಆರ್‌ಎಸ್’ ಬಗ್ಗೆ ಪ್ರಾತ್ಯಕ್ಷಿಕೆಯನ್ನೂ ನೀಡಲಾಗಿತ್ತು. ಆ ವೇಳೆ, ಬಿಸಿಸಿಐನ ಕೆಲ ಸಂದೇಹಗಳು ನಿವಾರಣೆಗೊಂಡಿದೆಯೆಂದು ಹೇಳಲಾಗಿದೆ. ಆದರೂ, ಪ್ರಾಯೋಗಿಕವಾಗಿ ಅದನ್ನು ಪರೀಕ್ಷಿಸಲು ಮುಂದಾಗಿರುವ ಬಿಸಿಸಿಐ, ಸದ್ಯಕ್ಕೆ ಭಾರತ- ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಅದನ್ನು ಅಳವಡಿಸಿಕೊಳ್ಳಲು ನಿರ್ಧಾರ ಕೈಗೊಂಡಿದೆ

ಹಾಕ್ ಐ ಕುರಿತಂತೆ ಬಿಸಿಸಿಐ ಮಾಡಿರುವ ಶಿಫಾರಸನ್ನು ಅಳವಡಿಸಿಕೊಂಡಿರುವ ಕ್ರಮಕ್ಕೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸಂತಸ ವ್ಯಕ್ತಪಡಿಸಿದ್ದಾರೆ.