ನವದೆಹಲಿ[ಮಾ.06]: ತೆರಿಗೆ ವಿನಾಯಿತಿ ಕೊಡಿಸದಿದ್ದರೆ 2021ರ ಟಿ20 ವಿಶ್ವಕಪ್‌ ಹಾಗೂ 2023ರ ಏಕದಿನ ವಿಶ್ವಕಪ್‌ ಅನ್ನು ಭಾರತದಿಂದ ಸ್ಥಳಾಂತರಿಸುವುದಾಗಿ ಎಚ್ಚರಿಸಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಐಸಿಸಿ) ತಿರುಗೇಟು ನೀಡಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ತ್ರೈಮಾಸಿಕ ಸಭೆ ವೇಳೆ ತೆರಿಗೆ ವಿನಾಯಿತಿ ಕೊಡಿಸಿ, ಇಲ್ಲವೇ 150 ಕೋಟಿ ರುಪಾಯಿ ತೆರಿಗೆ ಹೊರೆಯನ್ನು ನಿಭಾಯಿಸಿ ಎಂದು ಐಸಿಸಿ, ಬಿಸಿಸಿಐ ಮೇಲೆ ಒತ್ತಡ ಹೇರಿತ್ತು. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ವಿಶ್ವಕಪ್‌ ಆತಿಥ್ಯವನ್ನು ಕಸಿದುಕೊಂಡರೆ ತನಗೇನೂ ನಷ್ಟವಿಲ್ಲ ಎಂದು ತಿರುಗೇಟು ನೀಡಿದೆ.

ಬಿಸಿಸಿಐಗೆ ಐಸಿಸಿಯಿಂದ 150 ಕೋಟಿ ರುಪಾಯಿ ತೆರಿಗೆ ಹೊರೆ!

ಐಸಿಸಿ ಜತೆಗಿನ ತೆರಿಗೆ ತಿಕ್ಕಾಟದ ಕುರಿತು ಮಾತನಾಡಿರುವ ಬಿಸಿಸಿಐ ಅಧಿಕಾರಿ, ‘ನಮ್ಮ ತೆರಿಗೆ ಇಲಾಖೆ ಹಾಗೂ ಸಚಿವಾಲಯದ ನಿಯಮ ಹಾಗೂ ನಿರ್ಧಾರಗಳಿಗೆ ಬದ್ಧರಾಗಿರುತ್ತೇವೆ. ಭಾರತದಲ್ಲಿ ವಿಶ್ವಕಪ್‌ ನಡೆಯುವುವನ್ನು ನೋಡಲು ಇಚ್ಛಿಸುತ್ತೇವೆ. ಆದರೆ ಐಸಿಸಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾದರೆ ಅವರು ಮುಂದೆ ಆಗುವ ಎಡವಟ್ಟುಗಳನ್ನು ಎದುರಿಸಲು ಸಹ ಸಿದ್ಧರಿರಬೇಕು’ ಎಂದಿದ್ದಾರೆ. ‘ಭಾರತದಿಂದ ಐಸಿಸಿ ಟೂರ್ನಿಗಳನ್ನು ಸ್ಥಳಾಂತರಿಸಲು ನಿರ್ಧರಿಸಿದರೆ, ಯಾವುದೇ ಸಮಸ್ಯೆಯಿಲ್ಲ. ಆದರೆ ಬಿಸಿಸಿಐ, ಐಸಿಸಿಯಲ್ಲಿರುವ ತನ್ನ ಆದಾಯವನ್ನು ಹಿಂಪಡೆದರೆ ಯಾರಿಗೆ ಹೆಚ್ಚು ನಷ್ಟಎನ್ನುವುದು ತಿಳಿಯುತ್ತದೆ’ ಎಂದು ಬಿಸಿಸಿಐ ಅಧಿಕಾರಿ ಸವಾಲು ಹಾಕಿದ್ದಾರೆ.

ಪಾಕ್‌ ಆಟಗಾರರಿಗೆ ವೀಸಾ: ಬಿಸಿಸಿಐ ಮೇಲೆ ಐಸಿಸಿ ಒತ್ತಡ!

ತೆರಿಗೆ ವಿನಾಯಿತಿ ವಿವಾದ ಕುರಿತು ಹೆಚ್ಚಿನ ವಿವರಗಳನ್ನು ಬಿಚ್ಚಿಟ್ಟಿರುವ ಬಿಸಿಸಿಐ ಅಧಿಕಾರಿ, ‘ಕ್ರಿಕೆಟ್‌ ಆಸ್ಪ್ರೇಲಿಯಾಗೆ ತೆರಿಗೆ ವಿನಾಯಿತಿ ಕೊಡಿಸಲು ಸಾಧ್ಯವಾದಷ್ಟುಪ್ರಯತ್ನಿಸಿ ಎಂದು ಕೇಳಿದ್ದ ಐಸಿಸಿ, ಬಿಸಿಸಿಐಗೆ ಮಾತ್ರ ವಿನಾಯಿತಿ ಕೊಡಿಸಲೇ ಬೇಕು ಎಂದು ಒತ್ತಡ ಹೇರುತ್ತಿದೆ. ಐಸಿಸಿ ಒತ್ತಡಕ್ಕೆ ಬಿಸಿಸಿಐ ಆಡಳಿತ ಸಮಿತಿ ಮಣಿಯಬಾರದು. ವಿಶ್ವ ಕ್ರಿಕೆಟ್‌ಗೆ ಬಿಸಿಸಿಐ ಕೊಡುಗೆ ದೊಡ್ಡದಿದೆ’ ಎಂದಿದ್ದಾರೆ.