"

ಮುಂಬೈ(ಸೆ.12): ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಇನ್ನು ಎರಡು ದಿನ ಬಾಕಿ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಅಭ್ಯಾಸದಲ್ಲಿ ತೊಡಗಿದೆ. ಇತ್ತ ಟೀಂ ಇಂಡಿಯಾ ಆಯ್ಕೆ ಸಮಿತಿ ಹರಿಣಗಳ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟಿಸಿದೆ. ವಿಶೇಷ  ಅಂದರೆ 20ರ ಹರೆಯದ ಯುವ ಕ್ರಿಕೆಟಿಗ ಶುಭ್‌ಮನ್ ಗಿಲ್ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ  ವಿಂಡೀಸ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕೆಎಲ್ ರಾಹುಲ್‌ಗೆ ಕೊಕ್ ನೀಡಲಾಗಿದೆ. ಇನ್ನು ಮತ್ತೊರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಶುಭ್‌ಮನ್ ಗಿಲ್ ಇದೇ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ 20  ವರ್ಷದ ಯುವ ಕ್ರಿಕೆಟಿಗ ಇದೀಗ ಟೆಸ್ಟ್ ತಂಡಕ್ಕೆ ಆಯ್ಕೆಯಾಗೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರೆ, ಅಜಿಂಕ್ಯ ರಹಾನೆ ಉಪನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಸ್ಪಿನ್ನರ್‌ಗಳಾಗಿ ಆರ್ ಅಶ್ವಿನ್ ಹಾಗೂ ಕುಲ್ದೀಪ್ ಯಾದವ್ ಸ್ಥಾನ ಪಡೆದಿದ್ದರೆ, ಆಲ್ರೌಂಡರ್ ಕೋಟಾದಡಿ ರವೀಂದ್ರ ಜಡೇಜಾ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.  

 

 

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ಸೆ.15 ರಿಂದ ಆರಂಭಗೊಳ್ಳಲಿದೆ. ಆದರೆ ಟೆಸ್ಟ್ ಸರಣಿ ಅಕ್ಟೋಬರ್ 2 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ವಿಶಾಖಪಟ್ಟಣಂದಲ್ಲಿ ನಡೆಯಲಿದೆ. ಅಕ್ಟೋಬರ್ 10 ಪುಣೆಯಲ್ಲಿ 2ನೇ ಟೆಸ್ಟ್ ಹಾಗೂ ಅ.19 ರಂದು ರಾಂಚಿಯಲ್ಲಿ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.