ವಿಶ್ವ ಬ್ಯಾಡ್ಮಿಂಟನ್: ವಿಶ್ವಫೈನಲ್’ಗೆ ಸಿಂಧು ಲಗ್ಗೆ
ಇಂದು ನಡೆಯಲಿರುವ ಫೈನಲ್‌ನಲ್ಲಿ ಸಿಂಧು, ಒಲಿಂಪಿಕ್ ಚಾಂಪಿಯನ್ ಹಾಗೂ 2 ಬಾರಿ ವಿಶ್ವ ಚಾಂಪಿಯನ್‌ಶಿಪ್ ಚಿನ್ನ ವಿಜೇತೆ ಸ್ಪೇನ್‌ನ ಕ್ಯಾರೋಲಿನಾ ಮರಿನ್ ವಿರುದ್ಧ ಸೆಣಸಲಿದ್ದಾರೆ.
ನಾನ್ಜಿಂಗ್[ಆ.05]: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸತತ 2ನೇ ವರ್ಷ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೇರಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸಿಂಧು, ಜಪಾನ್‌ನ ಅಕಾನೆ ಯಮಗುಚಿಯನ್ನು 21-16, 24-22 ನೇರ ಗೇಮ್‌ಗಳಿಂದ ಮಣಿಸಿ, ಫೈನಲ್‌ಗೇರಿದರು.
ಇಂದು ನಡೆಯಲಿರುವ ಫೈನಲ್‌ನಲ್ಲಿ ಸಿಂಧು, ಒಲಿಂಪಿಕ್ ಚಾಂಪಿಯನ್ ಹಾಗೂ 2 ಬಾರಿ ವಿಶ್ವ ಚಾಂಪಿಯನ್‌ಶಿಪ್ ಚಿನ್ನ ವಿಜೇತೆ ಸ್ಪೇನ್‌ನ ಕ್ಯಾರೋಲಿನಾ ಮರಿನ್ ವಿರುದ್ಧ ಸೆಣಸಲಿದ್ದಾರೆ. 2016ರ ರಿಯೋ ಒಲಿಂಪಿಕ್ಸ್ ಫೈನಲ್‌ನಲ್ಲಿ ಸಿಂಧು, ಮರಿನ್‌ಗೆ ಶರಣಾಗಿದ್ದರು. ಈ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತೀಯ ಆಟಗಾರ್ತಿಗೆ ಉತ್ತಮ ಅವಕಾಶ ದೊರೆತಿದೆ.
ಕಳೆದ ವರ್ಷ ಗ್ಲಾಸ್ಗೋನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್’ಶಿಪ್ ಫೈನಲ್‌ನಲ್ಲಿ ಸಿಂಧು, ಜಪಾನ್‌ನ ನಜೋಮಿ ಓಕುಹಾರಾ ವಿರುದ್ಧ ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟಿದ್ದರು. ಇದಕ್ಕೂ ಮೊದಲು 2013, 2014ರಲ್ಲಿ
ಸಿಂಧು ಕಂಚಿನ ಪದಕ ಜಯಿಸಿದ್ದರು. ವಿಶ್ವ ನಂ.2 ಯಮಗುಚಿಯಿಂದ, ಸಿಂಧುಗೆ ಪ್ರಬಲ ಪೈಪೋಟಿ ಎದುರಾಯಿತು. 2ನೇ ಗೇಮ್‌ನಲ್ಲಿ 12-19ರಿಂದ ಹಿಂದಿದ್ದ ಭಾರತೀಯ ಆಟಗಾರ್ತಿ, ಸತತ 8 ಅಂಕ ಪಡೆದು 20-19ರಲ್ಲಿ ಮುನ್ನಡೆ ಪಡೆದರು. ಆದರೆ ಜಪಾನ್ ಆಟಗಾರ್ತಿ ಸುಲಭವಾಗಿ ಸೋಲೊಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಅಂತಿಮವಾಗಿ 24-22ರಲ್ಲಿ ಸಿಂಧು ಗೇಮ್ ಜಯಿಸಿ, ಪಂದ್ಯ ತಮ್ಮದಾಗಿಸಿಕೊಂಡರು.