ಲಂಡನ್(ಜು.22): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇದೀಗ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಶಾಕ್ ನೀಡಿದೆ. ಇಷ್ಟು ದಿನ ಕ್ರಿಕೆಟಿಗರಿಗೆ ಸಾಥ್ ನೀಡಿದ ಪತ್ನಿಯರು, ಗೆಳತಿಯರಿಗೆ ಗೇಟ್ ಪಾಸ್ ನೀಡಲು ಬಿಸಿಸಿಐ ನಿರ್ಧರಿಸಿದೆ.

ಏಕದಿನ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಪತ್ನಿಯರ ಜೊತೆ ಇಂಗ್ಲೆಂಡ್ ಸುತ್ತಾಡಿದ್ದರು. ಇದೀಗ ಟೀಂ ಇಂಡಿಯಾ ಟೆಸ್ಟ್ ಸರಣಿಗೆ ಅಭ್ಯಾಸ ಆರಂಭಿಸಿದೆ. ಇದೀಗ ಬಿಸಿಸಿಐ ಮ್ಯಾನೇಜ್ಮೆಂಟ್ ಕ್ರಿಕೆಟಿಗರ ಪತ್ನಿಯರನ್ನ ಇಂಗ್ಲೆಂಡ್ ತೊರೆಯಲು ಹೇಳಿದೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಕ್ರಿಕೆಟಿಗರ ಪ್ರದರ್ಶನಕ್ಕೆ ಪತ್ನಿಯರು ಟೀಕೆಗೆ ಒಳಗಾಗುತ್ತಿದ್ದಾರೆ. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನಕ್ಕೆ ಗೆಳತಿ ಅನುಷ್ಕಾ ಶರ್ಮಾ ಭಾರೀ ಟೀಕೆಗೆ ಗುರಿಯಾಗಿದ್ದರು. ಹೀಗಾಗಿ ಟೀಕೆಗಳಿಂದ ತಪ್ಪಿಸಿಕೊಳ್ಳಲು ಬಿಸಿಸಿಐ ನೂತನ ನಿಯಮ ಜಾರಿಗೆ ತರಲು ನಿರ್ಧರಿಸಿದೆ.

ಇಂಗ್ಲೆಂಡ್ ವಿರುದ್ಧದ ಆರಂಭಿಕ 3ಪಂದ್ಯಗಳಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಪತ್ನಿಯರು, ಗೆಳತಿಯರಿಂದ ದೂರವಿರಲು ಸೂಚಿಸಿದೆ. ಆರಂಭಿಕ ಟೆಸ್ಟ್ ಪಂದ್ಯದ  ಫಲಿತಾಂಶದ ಆಧಾರದ ಮೇಲೆ ಅಂತಿಮ 2 ಪಂದ್ಯಕ್ಕೆ ಪತ್ನಿಯರನ್ನ ಅನುವು ಮಾಡೋ ಕುರಿತು ನಿರ್ಧರಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.

ಇಂಗ್ಲೆಂಡ್ ವಿರುದ್ಧ ಭಾರತ 5 ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಆಗಸ್ಟ್ 1 ರಂದು ಮೊದಲ ಟೆಸ್ಟ್ ಆರಂಭವಾಗಲಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲುವು ಸಾಧಿಸಿ, ಶುಭಾರಂಭ ಮಾಡಲು ಟೀಂ ಇಂಡಿಯಾ ಕಸರತ್ತು ಆರಂಭಿಸಿದೆ.