ಖೋಖೋ ಲೀಗಲ್ಲಿ ಮಿನುಗಲು ಸಜ್ಜಾದ ಆಟೋ ಡ್ರೈವರ್ ಪುತ್ರ ಗೌತಮ್
ಅಲ್ಟಿಮೇಟ್ ಖೋ ಖೋ ಲೀಗ್‌ನಲ್ಲಿ ಕಣಕ್ಕಿಳಿಯಲು ಸಜ್ಜಾದ ಆಟೋ ಚಾಲಕನ ಪುತ್ರ ಎಂ.ಕೆ.ಗೌತಮ್
ಆಗಸ್ಟ್ 14ರಿಂದ ನಡೆಯಲಿರುವ ಲೀಗ್‌ಗೆ ಕರ್ನಾಟಕದ 9 ಮಂದಿ ಆಯ್ಕೆ
ಒಡಿಶಾ ಸರ್ಕಾರದ ಒಡೆತನದ ಒಡಿಶಾ ಜಗ್ಗರ್‌ನಾಟ್ಸ್ ತಂಡಕ್ಕೆ 5 ಲಕ್ಷ ರು.ಗೆ ಬಿಕರಿಯಾಗಿರುವ ಗೌತಮ್
- ನಾಸಿರ್ ಸಜಿಪ, ಕನ್ನಡಪ್ರಭ
ಬೆಂಗಳೂರು(ಜು.22): ಅಪ್ಪ ಆಟೋ ಚಾಲಕ. ಅಮ್ಮ ಗೃಹಿಣಿ. ನನಗೆ ಸಣ್ಣವನಿದ್ದಾಗಿನಿಂದಲೂ ಖೋ ಖೋ ಇಷ್ಟ. ಆರ್ಥಿಕ ಸಂಕಷ್ಟದ ನಡುವೆಯೂ ಆಟವನ್ನು ಬಿಟ್ಟಿಲ್ಲ. ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಲೇ ನಿತ್ಯ 4-5 ತಾಸು ಅಭ್ಯಾಸ ನಡೆಸುತ್ತೇನೆ. ಕೆಲವೊಮ್ಮೆ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವಾಗ ದೀರ್ಘ ರಜೆ ಬೇಕಾಗುತ್ತದೆ. ಈಗ ಅಲ್ಟಿಮೇಟ್ ಲೀಗ್‌ನಲ್ಲಿ ಪಾಲ್ಗೊಳ್ಳಲು 2.5 ತಿಂಗಳು ರಜೆ ಕೇಳಿದ್ದೇನೆ. ಸಿಗದಿದ್ದರೆ ಕೆಲಸವನ್ನೇ ಬಿಡಬೇಕಾಗುತ್ತದೆ.
ಇದು ಈಗಷ್ಟೇ ಘೋಷಣೆಯಾಗಿರುವ ಅಲ್ಟಿಮೇಟ್ ಖೋ ಖೋ ಲೀಗ್‌ನ ಒಡಿಶಾ ಜಗ್ಗರ್‌ನಾಟ್ಸ್ ತಂಡಕ್ಕೆ ಆಯ್ಕೆಯಾಗಿರುವ ಬೆಂಗಳೂರಿನ ಚಾಮರಾಜಪೇಟೆಯ ಎಂ.ಕೆ.ಗೌತಮ್ ಅವರ ಸಂಕಷ್ಟ ಹಾಗೂ ಅದರ ಹಿಂದೆಯೇ ಬರುವ ಆತ್ಮವಿಶ್ವಾಸದ ನುಡಿಗಳು. ಆಗಸ್ಟ್ 14ರಿಂದ ನಡೆಯಲಿರುವ ಲೀಗ್‌ಗೆ ಕರ್ನಾಟಕದ 9 ಮಂದಿ ಆಯ್ಕೆಯಾಗಿದ್ದು, ಈ ಸಂದರ್ಭದಲ್ಲಿ ಗೌತಮ್ ಕನ್ನಡಪ್ರಭದೊಂದಿಗೆ ತಮ್ಮ ಸಾಧನೆಯ ಹಾದಿಯನ್ನು ಹಂಚಿಕೊಂಡಿದ್ದಾರೆ.
ಶಾಲೆಯಲ್ಲೇ ಖೋ ಖೋ:
ಆಟೋ ಚಾಲಕ ಕಪನಿಗೌಡ-ರೇಖಾವತಿ ದಂಪತಿಯ ಪುತ್ರ ಗೌತಮ್‌ಗೆ ಶಾಲಾ ದಿನಗಳಲ್ಲೇ ಖೋ ಖೋ ಕೈ ಹಿಡಿಯಿತು. ಶಾಲೆಯಲ್ಲಿ ವೇಗವಾಗಿ ಓಡುವುದನ್ನು ಗಮನಿಸಿದ್ದ ಶಿಕ್ಷಕರು ಗೌತಮ್‌ರನ್ನು ಖೋ ಖೋ ತಂಡಕ್ಕೆ ಸೇರ್ಪಡೆಗೊಳಿಸಿದ್ದು, ಬಳಿಕ ಅವರು ಹಿಂದಿರುಗಿ ನೋಡಿದ್ದಿಲ್ಲ. ಮನೆಯ ಅರ್ಥಿಕ ಸಂಕಷ್ಟದ ನಡುವೆಯೂ ಕಠಿಣ ಅಭ್ಯಾಸ ನಡೆಸಿ ವಿವಿಧ ಟೂರ್ನಿಗಳಲ್ಲಿ ಪಾಲ್ಗೊಂಡಿರುವ ಅವರು ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲೂ ಮಿಂಚಿದ್ದಾರೆ. 2014ರಲ್ಲಿ ಮೊದಲ ಬಾರಿ ಅಂಡರ್-14 ವಿಭಾಗದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಗೌತಮ್, 2016ರಲ್ಲಿ ಜೂನಿಯರ್ ತಂಡದಲ್ಲಿ ಆಡಿದರು.
ಭಾರತ ತಂಡಕ್ಕೂ ಆಯ್ಕೆ:
ಅದೇ ವರ್ಷ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ತಂಡದಲ್ಲಿ ಸ್ಥಾನ ಪಡೆದರು. 2018ರ ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿರುವ ಅವರು, ನೇಪಾಳ ವಿರುದ್ಧ ಭಾರತ ತಂಡದಲ್ಲಿ ಆಡಿದರು. 4 ಬಾರಿ ದಕ್ಷಿಣ ವಲಯ ಚಾಂಪಿಯನ್‌ಶಿಪ್, 3 ಬಾರಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೂ ಅವರು ಕರ್ನಾಟಕ ತಂಡದ ಪರ ಆಡಿದ್ದು, ಹಲವು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಕೊಡುಗೆ ನೀಡಿದ್ದಾರೆ.
World Championships ಮೊದಲ ಪ್ರಯತ್ನದಲ್ಲೇ ಫೈನಲ್‌ಗೆ ನೀರಜ್ ಚೋಪ್ರಾ, ರೋಹಿತ್ ಯಾದವ್ ಲಗ್ಗೆ
ವಿಶ್ವಕಪ್, ಏಷ್ಯನ್ ಕೂಟಕ್ಕೆ ಆಯ್ಕೆ:
ಗೌತಮ್ ಸೇರಿದಂತೆ ರಾಜ್ಯದ ನಾಲ್ವರು ಆಟಗಾರರು ಅಕ್ಟೋಬರ್ ಕೊನೆಯಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್ ಹಾಗೂ ವರ್ಷಾಂತ್ಯದಲ್ಲಿ ನಡೆಯಲಿರುವ 22 ರಾಷ್ಟ್ರಗಳು ಪಾಲ್ಗೊಳ್ಳುವ ಖೋ ಖೋ ವಿಶ್ವಕಪ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಅಲ್ಟಿಮೇಟ್ ಖೋ ಖೋ ಲೀಗ್‌ಗೆ ತರಬೇತಿ ನಡೆಸುತ್ತಿದ್ದಾರೆ.
5 ಲಕ್ಷ ಬಂಪರ್
ಒಡಿಶಾ ಸರ್ಕಾರದ ಒಡೆತನದ ಒಡಿಶಾ ಜಗ್ಗರ್‌ನಾಟ್ಸ್ ತಂಡಕ್ಕೆ 5 ಲಕ್ಷ ರು.ಗೆ ಬಿಕರಿಯಾಗಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಗೌತಮ್ ವಿವಿಧ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಲೇ ಖಾಸಗಿ ಫೈನಾನ್ಸ್ ಕಂಪೆನಿಯಲ್ಲಿ ಕೆಲಸವನ್ನೂ ನಿರ್ವಹಿಸುತ್ತಿದ್ದು, ಈಗ ಅಲ್ಟಿಮೇಟ್ ಲೀಗ್‌ನಲ್ಲಿ ಪಾಲ್ಗೊಳ್ಳಬೇಕಾದರೆ ಈಗಿರುವ ಕಂಪೆನಿಯ ಕೆಲಸ ತೊರೆಯುವ ಆತಂಕ ಎದುರಾಗಿದೆ. ‘ಕೆಲ ಟೂರ್ನಿಗಳಲ್ಲಿ ಪಾಲ್ಗೊಳ್ಳುವಾಗ ಕಂಪೆನಿಯಿಂದ ದೀರ್ಘ ರಜೆ ಬೇಕಾಗುತ್ತದೆ. ಈಗ ಅಲ್ಟಿಮೇಟ್ ಲೀಗ್‌ನಲ್ಲಿ ಭಾಗವಹಿಸಲು ಎರಡೂವರೆ ತಿಂಗಳು ರಜೆ ಕೇಳಿದ್ದೇನೆ. ಸಿಗದಿದ್ದರೆ ಕೆಲಸವನ್ನೇ ಬಿಡಬೇಕಾಗುತ್ತದೆ’ ಎಂದು ಹೇಳುತ್ತಾರೆ ಗೌತಮ್.
‘ಕೆಲ ವರ್ಷಗಳ ಹಿಂದೆ ಸರ್ಕಾರ ಖೋ ಖೋ ಆಟಗಾರರಿಗೆ ಸ್ಕಾಲರ್‌ಶಿಪ್ ಮೂಲಕ ನೆರವು ನೀಡುತ್ತಿತ್ತು. ಆದರೆ ಈಗ ಅದು ಸ್ಥಗಿತಗೊಂಡಿದೆ. ಕೆಲ ಟೂರ್ನಿಗಳಲ್ಲಿ ಸಿಗುವ ಹಣದಿಂದ ದೀರ್ಘ ಕಾಲಕ್ಕೆ ಅಭ್ಯಾಸ ನಡೆಸಲು ಸಾಧ್ಯವಾಗುವುದಿಲ್ಲ. ಸರ್ಕಾರ ಖೋ ಖೋ ಆಟಗಾರರನ್ನು ಗುರುತಿಸಿ ಅಗತ್ಯ ನೆರವು ನೀಡಬೇಕು’ ಎಂದೂ ಗೌತಮ್ ಮನವಿ ಮಾಡಿದ್ದಾರೆ.