ಕಳೆದ ಬಾರಿ 2003ರಲ್ಲಿ ವೀನಸ್ ಆಸ್ಟ್ರೇಲಿಯಾ ಓಪನ್‌'ನ ಅಂತಿಮ ನಾಲ್ಕರ ಘಟ್ಟ ತಲುಪಿದ್ದು ಬಿಟ್ಟರೆ ಆನಂತರದಲ್ಲಿ ಇಂಥದ್ದೊಂದು ಸಾಧನೆ ಆಕೆಯಿಂದ ಹೊಮ್ಮಿರಲಿಲ್ಲ.

ಮೆಲ್ಬರ್ನ್(ಜ.24): ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಗಾರ್ಬೈನ್ ಮುಗುರುಜಾ ಕ್ವಾರ್ಟರ್‌ ಫೈನಲ್‌ನಲ್ಲೇ ಮುಗ್ಗರಿಸಿದರು. ವಿಶ್ವದ ನಂ.1 ಆಟಗಾರ್ತಿ ಜರ್ಮನಿಯ ಏಂಜಲಿಕ್ ಕೆರ್ಬರ್‌'ಗೆ ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಣಿಸಿದ್ದ ಯುವ ಆಟಗಾರ್ತಿ ಕೊಕೊ ವಾಂಡೆವೆಘೆ, ಮುಗುರುಜಾ ವಿರುದ್ಧದ ಎಂಟರ ಘಟ್ಟದ ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡಿ 6-4, 6-0 ಸೆಟ್‌'ಗಳ ಗೆಲುವು ಪಡೆದರು. 25ರ ಹರೆಯದ ಅಮೆರಿಕನ್ ಆಟಗಾರ್ತಿ ಇದೀಗ ಮುಂದಿನ ಹಂತದಲ್ಲಿ ತಮ್ಮ ದೇಶದವರೇ ಆದ, ವಿಶ್ವದ ಮಾಜಿ ನಂ.1 ಆಟಗಾರ್ತಿ ವೀನಸ್ ವಿಲಿಯಮ್ಸ್ ವಿರುದ್ಧ ಕಾದಾಡಲಿದ್ದಾರೆ.

ದಾಖಲೆ ಬರೆದ ವೀನಸ್

ಮಹಿಳೆಯರ ಸಿಂಗಲ್ಸ್ ವಿಭಾಗದ ಇನ್ನೊಂದು ಕ್ವಾರ್ಟರ್‌ ಫೈನಲ್ ಹಣಾಹಣಿಯಲ್ಲಿ 36ರ ಹರೆಯದ ವೀನಸ್ 14 ವರ್ಷಗಳ ಬಳಿಕ ಆಸ್ಟ್ರೇಲಿಯಾ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದ ಸಾಧನೆ ಮೆರೆದರು. ರಷ್ಯನ್ ಆಟಗಾರ್ತಿ ಅನಸ್ತಾಸಿಯಾ ಪಾವ್ಲಿಚೆಂಕೋವಾ ವಿರುದ್ಧದ ಕ್ವಾರ್ಟರ್‌ ಫೈನಲ್ ಸೆಣಸಾಟದಲ್ಲಿ ವೀನಸ್, 6-4, 7-6 ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು. ಕಳೆದ ಬಾರಿ 2003ರಲ್ಲಿ ವೀನಸ್ ಆಸ್ಟ್ರೇಲಿಯಾ ಓಪನ್‌'ನ ಅಂತಿಮ ನಾಲ್ಕರ ಘಟ್ಟ ತಲುಪಿದ್ದು ಬಿಟ್ಟರೆ ಆನಂತರದಲ್ಲಿ ಇಂಥದ್ದೊಂದು ಸಾಧನೆ ಆಕೆಯಿಂದ ಹೊಮ್ಮಿರಲಿಲ್ಲ. 73 ಗ್ರಾಂಡ್‌'ಸ್ಲಾಮ್ ಪಂದ್ಯಗಳ ಅಪಾರ ಅನುಭವ ಹೊಂದಿರುವ ವೀನಸ್, ‘‘ಈ ಸೆಮಿಫೈನಲ್ ಆಡಲು ನಾನು ಅರ್ಹಳಿದ್ದೇನೆ’’ ಎಂದು ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು.