Asianet Suvarna News Asianet Suvarna News

ಪ್ರಶಸ್ತಿ ಸುತ್ತಿನಲ್ಲಿ ವಿಲಿಯಮ್ಸ್ ಸೋದರಿಯರ ಕಾದಾಟ

ವೃತ್ತಿಬದುಕಿನಲ್ಲಿ ಒಟ್ಟಾರೆ 27 ಬಾರಿ ಪರಸ್ಪರ ಸೆಣಸಾಡಿರುವ ಈರ್ವರ ಪೈಕಿ ಸೆರೆನಾ 16 ಪಂದ್ಯಗಳಲ್ಲಿ ಪ್ರಾಬಲ್ಯ ಮೆರೆದಿದ್ದಾರೆ.

Australian Open Serena Williams to face sister Venus Williams in singles final

ಮೆಲ್ಬೋರ್ನ್(ಜ.26): ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಬರೋಬ್ಬರಿ 19 ವರ್ಷಗಳ ಬಳಿಕ ವಿಲಿಯಮ್ಸ್ ಸೋದರಿಯರು ಋತುವಿನ ಮೊದಲ ಗ್ರಾಂಡ್‌ಸ್ಲಾಮ್ ಟೂರ್ನಿಯೊಂದರ ಫೈನಲ್‌'ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ.
ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಇದೇ ಜೂನ್ ತಿಂಗಳಿನಲ್ಲಿ 37ರ ವಸಂತಕ್ಕೆ ಕಾಲಿರಿಸಲಿರುವ ವೀನಸ್ ವಿಲಿಯಮ್ಸ್ ತಮ್ಮ ದೇಶದವರೇ ಆದ ಕೊಕೊ ವಾಂಡೆವೆಘೆ ವಿರುದ್ಧ 6-7 (3/7), 6-2, 6-3 ಸೆಟ್‌'ಗಳಲ್ಲಿ ಗೆಲುವು ಪಡೆದರು. ಪ್ರಚಂಡ ಫಾರ್ಮ್‌ನಲ್ಲಿರುವ ವೀನಸ್, ಮೊದಲ ಸೆಟ್ ಅನ್ನು ಟೈಬ್ರೇಕರ್‌ಗೆ ಕೊಂಡೊಯ್ದರಾದರೂ, ಗೆಲುವು ಸಾಧಿಸುವಲ್ಲಿ ವಿಫಲವಾದರು. ಆದರೆ, ಆನಂತರದ ಎರಡೂ ಸೆಟ್‌ಗಳಲ್ಲಿ ಆಕ್ರಮಣಕಾರಿ ಆಟವಾಡಿದ ವೀನಸ್ ಜಯಭೇರಿ ಬಾರಿಸಿದರು.

ಇನ್ನು ಬಳಿಕ ನಡೆದ ಮತ್ತೊಂದು ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತೆ ಸೆರೆನಾ ವಿಲಿಯಮ್ಸ್, ಕ್ರೊವೇಷಿಯಾದ ಲುಸಿಕ್ ಬರೋನಿ ಎದುರು 6-2, 6-1 ನೇರ ಹಾಗೂ ಸುಲಭ ಸೆಟ್‌'ಗಳಲ್ಲಿ ಗೆಲುವು ಪಡೆದರು. ಎರಡೂ ಸೆಟ್‌'ಗಳ ಸೆಣಸಾಟದಲ್ಲಿ ಕ್ರೊವೇಷಿಯಾ ಆಟಗಾರ್ತಿಯ ಎದುರು ನಿರ್ದಯಿ ಆಟವಾಡಿದ ಸೆರೆನಾ, ಕೇವಲ 50 ನಿಮಿಷಗಳಲ್ಲೇ ವೈಭವದ ಗೆಲುವಿನೊಂದಿಗೆ ಫೈನಲ್‌'ಗೆ ದಾಂಗುಡಿಗೈದರು.

ಅಂದಹಾಗೆ ಶನಿವಾರ ನಡೆಯಲಿರುವ ಫೈನಲ್‌'ನಲ್ಲಿ ಈ ಸೋದರಿಯರಿಬ್ಬರೂ ಮುಖಾಮುಖಿಯಾಗುತ್ತಿದ್ದು, ಟೆನಿಸ್ ಪ್ರೇಮಿಗಳು ಈ ಪಂದ್ಯವನ್ನು ಕೌತುಕದಿಂದ ಎದುರುನೋಡುತ್ತಿದ್ದಾರೆ. ವೃತ್ತಿಬದುಕಿನಲ್ಲಿ ಒಟ್ಟಾರೆ 27 ಬಾರಿ ಪರಸ್ಪರ ಸೆಣಸಾಡಿರುವ ಈರ್ವರ ಪೈಕಿ ಸೆರೆನಾ 16 ಪಂದ್ಯಗಳಲ್ಲಿ ಪ್ರಾಬಲ್ಯ ಮೆರೆದಿದ್ದಾರೆ.

ಪೇಸ್-ಹಿಂಗಿಸ್ ಔಟ್

ಇನ್ನು ಆಸ್ಟ್ರೇಲಿಯಾ ಓಪನ್‌ನಲ್ಲಿ ಭಾರತದ ಡಬಲ್ಸ್ ಪ್ರವೀಣ ಲಿಯಾಂಡರ್ ಪೇಸ್ ಅವರ ಅಭಿಯಾನ ಅಂತ್ಯಕಂಡಿದೆ.

ಪುರುಷರ ಡಬಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದ ಪೇಸ್, ಮಿಶ್ರ ಡಬಲ್ಸ್ ವಿಭಾಗದಲ್ಲಿ ಸ್ವಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜತೆಗೆ ಕ್ವಾರ್ಟರ್‌ಫೈನಲ್ ತಲುಪಿದ್ದರಾದರೂ, ಈ ಹಂತದಲ್ಲಿ ಮುಗ್ಗರಿಸಿದರು. ಆಸ್ಟ್ರೇಲಿಯಾ ಜೋಡಿಯಾದ ಸ್ಯಾಮ್ ಗ್ರೋಥ್ ಮತ್ತು ಸಮಂತಾ ಸ್ಟಾಸರ್ ಜೋಡಿ 6-3, 6-2 ನೇರ ಸೆಟ್‌ಗಳಲ್ಲಿ ಇಂಡೋ-ಸ್ವಿಸ್ ಜೋಡಿಯನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ದಾಪುಗಾಲಿಟ್ಟಿತು.

55 ನಿಮಿಷಗಳ ಕಾದಾಟದಲ್ಲಿ ಪೇಸ್ ಮತ್ತು ಹಿಂಗಿಸ್ ದಿಟ್ಟ ಪೈಪೋಟಿಯನ್ನು ನೀಡದೆ ಸುಲಭವಾಗಿಯೇ ಆಸೀಸ್ ಜೋಡಿಗೆ ಶರಣಾದರು. ಪೇಸ್ ನಿರ್ಗಮದನೊಂದಿಗೆ ಭಾರತದ ಪ್ರಶಸ್ತಿ ಕನಸು ಈಗ ಸಾನಿಯಾ ಮಿರ್ಜಾ ಮೇಲಷ್ಟೇ ಅವಲಂಬಿತವಾಗಿದೆ. ಆಕೆ ಕೂಡ ಮಹಿಳೆಯರ ಡಬಲ್ಸ್‌ನಲ್ಲಿ ಹೊರಬಿದ್ದಿದ್ದು, ಮಿಶ್ರ ಡಬಲ್ಸ್‌ನಲ್ಲಿ ಜಯದ ಓಟ ಮುಂದುವರೆಸಿದ್ದಾರೆ.

 

 

Follow Us:
Download App:
  • android
  • ios