ಆಸ್ಟ್ರೇಲಿಯನ್ ಓಪನ್: 4 ಗಂಟೆ ಹೋರಾಡಿ ಕ್ವಾರ್ಟರ್'ಗೆ ಲಗ್ಗೆಯಿಟ್ಟ ನಡಾಲ್

sports | Monday, January 22nd, 2018
Suvarna Web Desk
Highlights

ಇಲ್ಲಿನ ಸುಡು ಬಿಸಿಲಿನಲ್ಲಿ ಶ್ವ್ಯಾರ್ಟ್ಜ್‌ಮನ್, ಸ್ಪೇನ್ ಆಟಗಾರ ಪ್ರತಿಯೊಂದು ಅಂಕಕ್ಕೂ ಶ್ರಮ ಪಡುವಂತೆ ಮಾಡಿದರು. ಎದುರಾದ ಸವಾಲನ್ನು ಮೆಟ್ಟಿನಿಂತ ನಡಾಲ್, 10ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್‌'ಗೇರಿದ ಹೆಗ್ಗಳಿಕೆಗೆ ಪಾತ್ರರಾದರು.

ಮೆಲ್ಬರ್ನ್(ಜ.22): ವರ್ಷದ ಮೊದಲ ಟೆನಿಸ್ ಗ್ರ್ಯಾಂಡ್‌'ಸ್ಲಾಂ ಆಸ್ಟ್ರೇಲಿಯನ್ ಓಪನ್‌'ನಲ್ಲಿ ವಿಶ್ವ ನಂ.1 ಆಟಗಾರ ರಾಫೆಲ್ ನಡಾಲ್ ಗೆಲುವಿನ ಓಟ ಮುಂದುವರಿದಿದೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್ 4ನೇ ಸುತ್ತಿನಲ್ಲಿ ಅರ್ಜೆಂಟೀನಾದ ಡಿಯಾಗೊ ಶ್ವ್ಯಾರ್ಟ್ಜ್‌ಮನ್ ವಿರುದ್ಧ ನಡಾಲ್ 6-3, 6-7(4/7), 6-3, 6-3 ಸೆಟ್‌'ಗಳಲ್ಲಿ ಗೆಲುವು ಸಾಧಿಸಿ, ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಸುಮಾರು 4 ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ಎದುರಾಳಿಯಿಂದ ನಡಾಲ್‌'ಗೆ ಕಠಿಣ ಪೈಪೋಟಿ ಎದುರಾಯಿತು. ಇಲ್ಲಿನ ಸುಡು ಬಿಸಿಲಿನಲ್ಲಿ ಶ್ವ್ಯಾರ್ಟ್ಜ್‌ಮನ್, ಸ್ಪೇನ್ ಆಟಗಾರ ಪ್ರತಿಯೊಂದು ಅಂಕಕ್ಕೂ ಶ್ರಮ ಪಡುವಂತೆ ಮಾಡಿದರು. ಎದುರಾದ ಸವಾಲನ್ನು ಮೆಟ್ಟಿನಿಂತ ನಡಾಲ್, 10ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್‌'ಗೇರಿದ ಹೆಗ್ಗಳಿಕೆಗೆ ಪಾತ್ರರಾದರು.

ನಂ.1 ಸ್ಥಾನ ಭದ್ರ: 17ನೇ ಗ್ರ್ಯಾಂಡ್‌'ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ನಡಾಲ್, ಪ್ರೀ ಕ್ವಾರ್ಟರ್‌'ನಲ್ಲಿ ಗೆಲ್ಲುವ ಮೂಲಕ ನೂತನ ಶ್ರೇಯಾಂಕದಲ್ಲಿ ಪಟ್ಟಿಯಲ್ಲಿ ತಾವೇ ನಂ.1 ಸ್ಥಾನದಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಂಡರು. ಕ್ವಾರ್ಟರ್ ಫೈನಲ್‌'ನಲ್ಲಿ ನಡಾಲ್‌'ಗೆ ಕ್ರೊವೇಷಿಯಾದ ಮರಿನ್ ಸಿಲಿಚ್ ಎದುರಾಗಲಿದ್ದು, ಮತ್ತೊಂದು ರೋಚಕ ಪಂದ್ಯ ನಿರೀಕ್ಷೆ ಮಾಡಬಹುದಾಗಿದೆ. 6ನೇ ಶ್ರೇಯಾಂಕಿತ ಸಿಲಿಚ್, 4ನೇ ಸುತ್ತಿನ ಪಂದ್ಯದಲ್ಲಿ 10ನೇ ಶ್ರೇಯಾಂಕಿತ ಆಟಗಾರ ಸ್ಪೇನ್‌'ನ ಪಾಬ್ಲೊ ಕೊರ್ರೆರನಾ ಬುಸ್ಟಾ ವಿರುದ್ಧ 6-7,6-3, 7-6,7-6 ಸೆಟ್‌'ಗಳಲ್ಲಿ ಜಯ ಗಳಿಸಿದರು. ಇದು ಗ್ರ್ಯಾಂಡ್‌'ಸ್ಲಾಂಗಳಲ್ಲಿ ಅವರ 100ನೇ ಗೆಲುವು ಎನ್ನುವುದು ವಿಶೇಷ.

ಬೋಪಣ್ಣ ಜೋಡಿ ಶುಭಾರಂಭ: ಮಿಶ್ರ ಡಬಲ್ಸ್‌'ನ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ ರೋಹನ್ ಬೋಪಣ್ಣ ಹಾಗೂ ಹಂಗೇರಿಯ ಟಿಮಿಯಾ ಬಾಬೊಸ್ ಜೋಡಿ ಶುಭಾರಂಭ ಮಾಡಿದೆ. ಆಸ್ಟ್ರೇಲಿಯಾದ ವಿಟ್ಟಿಂಗ್ಟನ್ ಹಾಗೂ ಪೆರೆಜ್ ಜೋಡಿ ವಿರುದ್ಧ ಬೋಪಣ್ಣ-ಬಾಬೊಸ್ 6-2, 6-4 ಸೆಟ್‌'ಗಳಲ್ಲಿ ಗೆಲುವು ಪಡೆದರು.

Comments 0
Add Comment

    ಕಾಮುಕರ ಬಗ್ಗೆ ಸಿನಿತಾರೆಯರು ಬಿಚ್ಚಿಟ್ಟ ಕರಾಳ ಸತ್ಯ..!

    video | Saturday, January 20th, 2018
    Suvarna Web Desk