Asianet Suvarna News Asianet Suvarna News

ಆಸ್ಪ್ರೇಲಿಯನ್‌ ಓಪನ್‌: 3ನೇ ಸುತ್ತಿಗೆ ಫೆಡರರ್‌, ನಡಾಲ್‌

18ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಾಫೆಲ್‌ ನಡಾಲ್‌ ಸಹ 2ನೇ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿ 3ನೇ ಸುತ್ತಿಗೆ ಪ್ರವೇಶ ಪಡೆದರು. ಆಸ್ಪ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ವಿರುದ್ಧ ನಡಾಲ್‌ 6-3, 6-2, 6-2 ನೇರ ಗೇಮ್‌ಗಳಲ್ಲಿ ಜಯಿಸಿದರು. 

Australian Open 2019 Roger Federer enters 3rd round
Author
Melbourne VIC, First Published Jan 17, 2019, 11:42 AM IST

ಮೆಲ್ಬರ್ನ್‌[ಜ.17]: ಸತತ 20ನೇ ವರ್ಷ ರೋಜರ್‌ ಫೆಡರರ್‌ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂನ ಪುರುಷರ ಸಿಂಗಲ್ಸ್‌ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಬುಧವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಫೆಡರರ್‌, ಬ್ರಿಟನ್‌ನ ಡೇನಿಯಲ್‌ ಇವಾನ್ಸ್‌ ವಿರುದ್ಧ 7-6, 7-6, 6-3 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

18ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಾಫೆಲ್‌ ನಡಾಲ್‌ ಸಹ 2ನೇ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿ 3ನೇ ಸುತ್ತಿಗೆ ಪ್ರವೇಶ ಪಡೆದರು. ಆಸ್ಪ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ವಿರುದ್ಧ ನಡಾಲ್‌ 6-3, 6-2, 6-2 ನೇರ ಗೇಮ್‌ಗಳಲ್ಲಿ ಜಯಿಸಿದರು. ಆದರೆ 5ನೇ ಶ್ರೇಯಾಂಕಿತ ದ.ಆಫ್ರಿಕಾದ ಕೆವಿನ್‌ ಆ್ಯಂಡರ್‌ಸನ್‌ ಆಘಾತ ಅನುಭವಿಸಿದರು. 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಫ್ರಾನ್ಸೆಸ್‌ ಟಿಯಾಫೋ ವಿರುದ್ಧ 6-4, 4-6, 4-6, 5-7 ಸೆಟ್‌ಗಳಲ್ಲಿ ಸೋತು ಹೊರಬಿದ್ದರು.

ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್‌ ಡೆನ್ಮಾರ್ಕ್ನ ಕ್ಯಾರೋಲಿನ್‌ ವೋಜ್ನಿಯಾಕಿ, ಸ್ವೀಡನ್‌ನ ಜೊಹಾನ ಲಾರ್ಸನ್‌ ವಿರುದ್ಧ 6-1, 6-3ರಲ್ಲಿ ಗೆದ್ದರೆ, ರಷ್ಯಾದ ಮರಿಯಾ ಶರಪೋವಾ 2ನೇ ಸುತ್ತಿನಲ್ಲಿ ಸ್ವೀಡನ್‌ನ ರೆಬೆಕ್ಕಾ ಪೀಟರ್ಸನ್‌ ವಿರುದ್ಧ 6-2, 6-1 ಸೆಟ್‌ಗಳಲ್ಲಿ ಜಯಗಳಿಸಿದರು. 3ನೇ ಸುತ್ತಿನಲ್ಲಿ ವೋಜ್ನಿಯಾಕಿ ಹಾಗೂ ಶರಪೋವಾ ಮುಖಾಮುಖಿಯಾಗಲಿದ್ದು, ಭಾರೀ ಕುತೂಹಲ ಮೂಡಿಸಿದೆ. ಇದೇ ವೇಳೆ 2ನೇ ಶ್ರೇಯಾಂಕಿತೆ ಜರ್ಮನಿಯ ಆ್ಯಂಜಿಲಿಕ್‌ ಕೆರ್ಬರ್‌ ಕೂಡ 2ನೇ ಸುತ್ತಿನಲ್ಲಿ ಬ್ರೆಜಿಲ್‌ನ ಹಡ್ಡಾದ್‌ ಮಯಿಯಾ ವಿರುದ್ಧ 6-2, 6-3ರ ಸುಲಭ ಗೆಲುವು ದಾಖಲಿಸಿ 3ನೇ ಸುತ್ತಿಗೇರಿದರು.

ಡಬಲ್ಸ್‌: ಒಂದೇ ದಿನ ಭಾರತದ ಸವಾಲು ಅಂತ್ಯ!

ಪುರುಷರ ಡಬಲ್ಸ್‌ನಲ್ಲಿ ಭಾರತೀಯರ ಸವಾಲು ಮೊದಲ ದಿನವೇ ಮುಕ್ತಾಯಗೊಂಡಿದೆ. ರೋಹನ್‌ ಬೋಪಣ್ಣ-ದಿವಿಜ್‌ ಶರಣ್‌ ಜೋಡಿ ಸ್ಪೇನ್‌ನ ಕರ್ರೆನೊ ಬುಸ್ಟಾ-ಗಾರ್ಸಿಯಾ ಲೊಪೇಜ್‌ ಜೋಡಿ ವಿರುದ್ಧ 1-6, 6-4, 5-7 ಸೆಟ್‌ಗಳಲ್ಲಿ ಸೋತರೆ, ಲಿಯಾಂಡರ್‌ ಪೇಸ್‌ ಹಾಗೂ ಮೆಕ್ಸಿಕೋದ ರಯೆಸ್‌ ವರೆಲಾ ಜೋಡಿ 5-7, 6-7 ಸೆಟ್‌ಗಳಲ್ಲಿ ಅಮೆರಿಕದ ಆಸ್ಟಿನ್‌ ಹಾಗೂ ಆಸ್ಪ್ರೇಲಿಯಾದ ಸಿಟಾಕ್‌ ಜೋಡಿಗೆ ಶರಣಾಯಿತು. 
ಜೀವನ್‌ ನೆಡುಂಚೆಯೆನ್‌ ಹಾಗೂ ಅಮೆರಿಕದ ನಿಕೋಲಾಸ್‌ ಜೋಡಿ ಜರ್ಮನಿಯ ಕ್ರಾವೀರ್ಟ್ಜ ಹಾಗೂ ಕ್ರೊವೇಷಿಯಾದ ಮೆಕ್ಟಿಕ್‌ ಜೋಡಿ ವಿರುದ್ಧ 6-4, 6-7, 5-7 ಸೆಟ್‌ಗಳಲ್ಲಿ ಸೋಲುಂಡಿತು.

Follow Us:
Download App:
  • android
  • ios