ಸೆಮಿಫೈನಲ್ ಪಂದ್ಯದಲ್ಲಿ ಮಿಥಾಲಿ ಪಡೆಯು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಲಂಡನ್(ಜು.15): ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಸಾಂಘಿಕ ಪ್ರದರ್ಶನ ತೋರಿದ ವನಿತೆಯರ ಟೀಂ ಇಂಡಿಯಾ 186ರನ್'ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿಫೈನಲ್'ಗೆ ಲಗ್ಗೆಯಿಟ್ಟಿದೆ.

ಇಲ್ಲಿನ ಕೌಂಟಿ ಗ್ರೌಂಡ್'ನಲ್ಲಿ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕಿವೀಸ್ ಪಡೆಯ ಎದುರು ಸಂಪೂರ್ಣ ಪ್ರಾಬಲ್ಯ ಮೆರೆದ ಮಿಥಾಲಿ ರಾಜ್ ಪಡೆ ಅರ್ಹವಾಗಿಯೇ ಸೆಮಿಫೈನಲ್ ಪ್ರವೇಶಿಸಿದೆ.

ನಾಯಕಿ ಮಿಥಾಲಿ ರಾಜ್ ಭರ್ಜರಿ ಶತಕ, ಕನ್ನಡತಿ ವೇದಾ ಕೃಷ್ಣಮೂರ್ತಿಯ ಅಬ್ಬರದ ಅರ್ಧಶತಕ ಹಾಗೂ ರಾಜೇಶ್ವರಿ ಗಾಯಕ್ವಾಡ್ ಚಾಣಾಕ್ಷ ಬೌಲಿಂಗ್ ನೆರವಿನಿಂದ ಟೀಂ ಇಂಡಿಯಾ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಮಿಥಾಲಿ ಪಡೆಯು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಮಿಥಾಲಿ ಪಡೆ ನೀಡಿದ್ದ 265ರನ್'ಗಳ ಗುರಿಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡ ಆರಂಭದಲ್ಲೇ ಮುಗ್ಗರಿಸಿತು. ತಂಡದ ಮೊತ್ತ 7 ರನ್ ಗಳಾಗುವಷ್ಟರಲ್ಲೇ ಆರಂಭಿಕ ಆಟಗಾರ್ತಿಯರಿಬ್ಬರೂ ಪೆವಿಲಿಯನ್ ಸೇರಿದರು. ನಂತರ ದಾಳಿಗಿಳಿದ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಅಂತಿಮವಾಗಿ ಕಿವೀಸ್ ಪಡೆ 79 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತು. ಭಾರತದ ಪರ ಶಿಸ್ತುಬದ್ಧ ದಾಳಿ ನಡೆಸಿದ ರಾಜೇಶ್ವರಿ ಗಾಯಕ್ವಾಡ್ 15ರನ್ ನೀಡಿ 5 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 2, ಜೂಲನ್ ಗೋಸ್ವಾಮಿ, ಪೂನಮ್ ಯಾದವ್ ಮತ್ತು ಶಿಖಾ ಪಾಂಡೆ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತರು ಮೊದಲು ಬ್ಯಾಟಿಂಗ್'ಗಿಳಿದ ಭಾರತದ ಆರಂಭ ಕೂಡಾ ಅಷ್ಟೇನು ಉತ್ತಮವಾಗಿರಲಿಲ್ಲ. ತಂಡದ ಮೊತ್ತ 21ರನ್'ಗಳಾಗುವಷ್ಟರಲ್ಲಿ ಪೂನಮ್ ರಾವತ್ ಹಾಗೂ ಸ್ಮ್ರಿತಿ ಮಂದಾನ ಪೆವಿಲಿಯನ್ ಸೇರಿದ್ದರು. ಮೂರನೇ ವಿಕೆಟ್'ಗೆ ಜತೆಯಾದ ನಾಯಕಿ ಮಿಥಾಲಿ ರಾಜ್ ಹಾಗೂ ಹರ್ಮನ್'ಪ್ರೀತ್ ಕೌರ್ ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಸಂಕಷ್ಟದಿಂದ ಮೇಲೆತ್ತಿದರು. ಕಳೆದ ಪಂದ್ಯದಲ್ಲಿ ಅತಿಹೆಚ್ಚು ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದ ಮಿಥಾಲಿ ಮಹತ್ವದ ಪಂದ್ಯದಲ್ಲಿ ಶತಕ(109ರನ್ 123 ಎಸೆತ) ಸಿಡಿಸಿ ಸಂಭ್ರಮಿಸಿದರು. ಮಿಥಾಲಿಗೆ ತಕ್ಕ ಸಾಥ್ ನೀಡಿದ ಹರ್ಮನ್'ಪ್ರೀತ್ ಕೌರ್ ಅರ್ಧಶತಕ(60ರನ್) ಬಾರಿಸಿ ವಿಕೆಟ್ ಒಪ್ಪಿಸಿದರು.

ಈ ನಂತರ ಮಿಥಾಲಿ ಕೂಡಿಕೊಂಡು ಅಬ್ಬರದ ಬ್ಯಾಟಿಂಗ್ ಮಾಡಿದ ಕನ್ನಡತಿ ವೇದಾ ಕೃಷ್ಣಮೂರ್ತಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಕೇವಲ 45 ಎಸೆತಗಳನ್ನೆದುರಿಸಿದ ವೇದಾ 70 ರನ್ ಬಾರಿಸಿದರು.

ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕಿ ಮಿಥಾಲಿ ರಾಜ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್:

ಭಾರತ : 265/7

ಮಿಥಾಲಿ ರಾಜ್ : 109

ವೇದಾ ಕೃಷ್ಣಮೂರ್ತಿ: 70

ಹನ್ನಾ ರೋವ್ : 30/2

ನ್ಯೂಜಿಲ್ಯಾಂಡ್ : 79/10

ಕೇಥಿ ಮಾರ್ಟಿನ್ : 26

ಅಮೇಲಿಯಾ ಕೆರ್ರಿ : 12

ರಾಜೇಶ್ವರಿ ಗಾಯಕ್ವಾಡ್ : 15/5