ತಿರುವನಂತಪುರಂ[ಮಾ.22]: ಭಾರತದ ಅಗ್ರ ಓಟಗಾರ್ತಿ ಟಿಂಟು ಲುಕಾ ವೃತ್ತಿಬದುಕಿನ ವಿದಾಯ ಘೋಷಿಸಲು ನಿರ್ಧರಿಸಿದ್ದಾರೆ. 2010, 2014ರ ಏಷ್ಯನ್‌ ಗೇಮ್ಸ್‌ಗಳಲ್ಲಿ 3 ಪದಕ ಪಡೆದಿದ್ದ ಟಿಂಟು, ದೀರ್ಘಾವಧಿಯಿಂದ ಮೊಣಕಾಲು ಗಾಯದಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳಲು ನಿರೀಕ್ಷೆಗಿಂತ ಹೆಚ್ಚಿನ ಸಮಯ ಹಿಡಿಯುತ್ತಿದೆ. ಹೀಗಾಗಿ ನಿವೃತ್ತಿಗೆ ನಿರ್ಧಾರಿಸಿದ್ದಾರೆ ಎನ್ನಲಾಗಿದೆ. 

ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಐಎಫ್‌)ಗೆ ಟಿಂಟು ಕೋಚ್‌ ಪಿ.ಟಿ.ಉಷಾ ಪತ್ರವೊಂದನ್ನು ಬರೆದಿದ್ದು, ರಾಷ್ಟ್ರೀಯ ತರಬೇತಿಗೆ ಆಯ್ಕೆಯಾಗಿರುವ ಅಥ್ಲೀಟ್‌ಗಳ ಪಟ್ಟಿಯಿಂದ ಟಿಂಟು ಹೆಸರನ್ನು ತೆಗೆಯುವಂತೆ ಕೋರಿದ್ದಾರೆ. ರೈಲ್ವೇ ಇಲಾಖೆಯ ಉದ್ಯೋಗಿಯಾಗಿರುವ ಟಿಂಟು, ಪೂರ್ಣಾವಧಿ ನೌಕರರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.

ಕೇರಳ ಮೂಲದ 29 ವರ್ಷದ ಟಿಂಟು ಗವಾಂಗ ಜೌ ಹಾಗೂ ಇಂಚೋನ್'ನಲ್ಲಿ ನಡೆದ ಏಷ್ಯನ್ ಗೇಮ್ಸ್’ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದರು.