ಜಕಾರ್ತ(ಅ.12): ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಭಾರತೀಯ ಹೈಜಂಪ್‌ ಅಥ್ಲೀಟ್‌ಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಾಲಿ ಚಾಂಪಿಯನ್‌ ಶರದ್‌ ಕುಮಾರ್‌ 2 ದಾಖಲೆಗಳನ್ನು ಪುಡಿಗುಟ್ಟಿಸತತ 2ನೇ ಚಿನ್ನದ ಪದಕ ಗೆದ್ದರೆ, ರಿಯೋ ಒಲಿಂಪಿಕ್ಸ್‌ ಕಂಚು ವಿಜೇತ ವರುಣ್‌ ಭಾಟಿ ಬೆಳ್ಳಿ ಗೆದ್ದರು. ರಿಯೋ ಗೇಮ್ಸ್‌ ಚಿನ್ನ ವಿಜೇತ ಮರಿಯಪ್ಪನ್‌ ತಂಗವೇಲು ಕಂಚು ಗಳಿಸಿದರು.

ಪುರುಷರ ಟಿ 42/63 ವಿಭಾಗದಲ್ಲಿ ಭಾರತ ಎಲ್ಲಾ ಮೂರು ಪದಕಗಳನ್ನು ಗೆದ್ದುಕೊಂಡಿತು. ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ವಿಜೇತ ಶರದ್‌ 1.90 ಮೀ. ಜಿಗಿದು ಏಷ್ಯನ್‌ ಹಾಗೂ ಕೂಟ ದಾಖಲೆಯನ್ನು ಮುರಿದರು. ವರುಣ್‌ (1.82 ಮೀ) ಹಾಗೂ ಮರಿಯಪ್ಪನ್‌ (1.67 ಮೀ) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.

ಗುರುವಾರ ಭಾರತ ಮತ್ತಷ್ಟುಪದಕಗಳನ್ನು ಗೆದ್ದುಕೊಂಡಿತು. ಪುರುಷರ ಎಫ್‌46 ವಿಭಾಗದ ಜಾವೆಲಿನ್‌ ಥ್ರೋನಲ್ಲಿ ಸುಂದರ್‌ ಸಿಂಗ್‌ ಗುಜ್ಜಾರ್‌ ಬೆಳ್ಳಿ ಗೆದ್ದರೆ, ರಿಂಕು ಕಂಚಿನ ಪದಕ ಪಡೆದರು. ಪುರುಷರ 400 ಮೀ. ಟಿ13 ವಿಭಾಗದ ಓಟದಲ್ಲಿ ಅವ್ನಿಲ್‌ ಕುಮಾರ್‌ ಕಂಚು ಪಡೆದರು. ಟಿ44 ವಿಭಾಗದಲ್ಲಿ ಆನಂದ್‌ ಗುಣಶೇಖರ್‌ ಚಿನ್ನ ಗೆದ್ದರೆ, ಇದೇ ವಿಭಾಗದಲ್ಲಿ ವಿನಯ್‌ ಕುಮಾರ್‌ ಕಂಚಿಗೆ ತೃಪ್ತಿಪಟ್ಟರು. ಪುರುಷರ 400 ಮೀ. ಟಿ45/46/47 ವಿಭಾಗದಲ್ಲಿ ಸಂದೀಪ್‌ ಮಾನ್‌ ಕಂಚಿನ ಪದಕ ಜಯಿಸಿದರು.

ಮಹಿಳೆಯರ 400 ಮೀ. ಟಿ45/46/47 ವಿಭಾಗದಲ್ಲಿ ಜಯಂತಿ ಬೆಹೆರಾ ಬೆಳ್ಳಿ ಗೆದ್ದರೆ, 400 ಮೀ. ಟಿ12 ವಿಭಾಗದಲ್ಲಿ ಕರ್ನಾಟಕದ ರಾಧಾ ವೆಂಕಟೇಶ್‌ ಕಂಚಿನ ಪದಕ ಜಯಿಸಿದರು. ಪುರುಷರ 400 ಮೀ. ಎಸ್‌10 ಫ್ರೀ ಸ್ಟೈಲ್‌ ಈಜು ಸ್ಪರ್ಧೆಯಲ್ಲಿ ಸ್ಪಪ್ನಿಲ್‌ ಪಾಟೀಲ್‌ ಕಂಚು ಗೆದ್ದರು. ಭಾರತ 8 ಚಿನ್ನ, 17 ಬೆಳ್ಳಿ, 25 ಕಂಚಿನೊಂದಿಗೆ ಒಟ್ಟು 50 ಪದಕಗಳನ್ನು ಗೆದ್ದಿದ್ದು ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.