Asianet Suvarna News Asianet Suvarna News

ಏಷ್ಯನ್‌ ಪ್ಯಾರಾ ಗೇಮ್ಸ್‌ಗೆ ಭಾರತದಿಂದ ದಾಖಲೆಯ 303 ಕ್ರೀಡಾಳುಗಳು ಭಾಗಿ..!

ಜಕಾರ್ತದಲ್ಲಿ ನಡೆದಿದ್ದ 2018ರ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತದ 190 ಮಂದಿ ಸ್ಪರ್ಧಿಸಿದ್ದರು. ಕ್ರೀಡಾ ಸಚಿವಾಲಯ ಈ ಬಾರಿ 191 ಪುರುಷ, 112 ಮಹಿಳಾ ಕ್ರೀಡಾಪಟುಗಳನ್ನು ಕಳುಹಿಸಲಿದೆ.

Asian Para Games 2023 Sports Ministry sanctions 303 athletes 143 coaches support staff kvn
Author
First Published Oct 18, 2023, 3:26 PM IST

ಹಾಂಗ್‌ಝೋ(ಅ.18) : ಚೀನಾದಲ್ಲಿ ಅ.22ರಿಂದ 28ರ ವರೆಗೆ ನಡೆಯಲಿರುವ 4ನೇ ಆವೃತ್ತಿ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದಿಂದ ದಾಖಲೆಯ 303 ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ. ಇದು ಈ ವರೆಗಿನ ಗರಿಷ್ಠ ಎನಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಭಾರತದಿಂದ 200ಕ್ಕೂ ಹೆಚ್ಚು ಸ್ಪರ್ಧಿಗಳು ಪ್ಯಾರಾ ಏಷ್ಯಾಡ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಜಕಾರ್ತದಲ್ಲಿ ನಡೆದಿದ್ದ 2018ರ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತದ 190 ಮಂದಿ ಸ್ಪರ್ಧಿಸಿದ್ದರು. ಕ್ರೀಡಾ ಸಚಿವಾಲಯ ಈ ಬಾರಿ 191 ಪುರುಷ, 112 ಮಹಿಳಾ ಕ್ರೀಡಾಪಟುಗಳನ್ನು ಕಳುಹಿಸಲಿದೆ. ಭಾರತೀಯರು 17 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದು, 123 ಮಂದಿ ಅಥ್ಲೆಟಿಕ್ಸ್‌ನಲ್ಲೇ ಕಣಕ್ಕಿಳಿಯಲಿದ್ದಾರೆ. ಈ ಬಾರಿ ಅ.19ರಿಂದಲೇ ಸ್ಪರ್ಧೆಗಳು ಆರಂಭಗೊಳ್ಳಲಿದ್ದು, ಅ.22ಕ್ಕೆ ಅಧಿಕೃತವಾಗಿ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ. 2018ರಲ್ಲಿ ಭಾರತ 72 ಪದಕ ಗೆದ್ದಿತ್ತು.

ರಾಜ್ಯದ 26 ಜನ:

ಭಾರತ ತಂಡದಲ್ಲಿ ಕರ್ನಾಟಕದ 26 ಸ್ಪರ್ಧಿಗಳು ಸಹ ಇದ್ದಾರೆ. ರಾಜ್ಯದ ಕ್ರೀಡಾಪಟುಗಳು ಈಜು, ಅಥ್ಲೆಟಿಕ್ಸ್, ಪವರ್‌ಲಿಫ್ಟಿಂಗ್, ಬೋಸಿಯಾ ಸೇರಿ ಇನ್ನೂ ಕೆಲ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.

ಭಾರತದಲ್ಲಿ ನಡೆಯುತ್ತಾ 2036ರ ಒಲಿಂಪಿಕ್ಸ್‌?: 2026ರ ವೇಳೆಗೆ ನಿರ್ಧಾರ!

ಮುಂಬೈ: 2036ರ ಒಲಿಂಪಿಕ್ಸ್‌ ಆತಿಥ್ಯ ಹಕ್ಕು ಪಡೆಯಲು ಭಾರತ ಪ್ರಯತ್ನ ಮುಂದುವರಿಸಿದ್ದರೂ ಈ ಬಗ್ಗೆ 2026ರ ವೇಳೆಗಷ್ಟೇ ನಿರ್ಧಾರ ಹೊರಬೀಳಲಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ(ಐಒಸಿ) ಖಚಿತಪಡಿಸಿದೆ.

ಡೆನ್ಮಾರ್ಕ್‌ ಓಪನ್‌ 2023: ಪಿ ವಿ ಸಿಂಧು ಶುಭಾರಂಭ

ಈ ಬಗ್ಗೆ ಭಾನುವಾರ ಮಾಹಿತಿ ನೀಡಿರುವ ಐಒಸಿ, 2036ರ ಒಲಿಂಪಿಕ್ಸ್‌ಗೆ ಯಾರು ಆತಿಥ್ಯ ವಹಿಸಲಿದ್ದಾರೆ ಎಂಬುದನ್ನು ಐಒಸಿ ನೂತನ ಸಮಿತಿಯು 2026 ಅಥವಾ 2027ರಲ್ಲಿ ನಿರ್ಧರಿಸಲಿದೆ ಎಂದಿದೆ. ಸದ್ಯ ಥಾಮಸ್‌ ಬಾಚ್‌ ಐಒಸಿ ಅಧ್ಯಕ್ಷರಾಗಿದ್ದು, ಅವರ ಅವಧಿ 2025ರ ವೇಳೆಗೆ ಮುಕ್ತಾಯಗೊಳ್ಳಲಿದೆ. ಆ ಬಳಿಕವಷ್ಟೇ 2036ರ ಒಲಿಂಪಿಕ್ಸ್‌ ಬಗ್ಗೆ ನಿರ್ಧಾರ ಹೊರಬೀಳಲಿದೆ. 2024ರ ಒಲಿಂಪಿಕ್ಸ್‌ ಪ್ಯಾರಿಸ್‌ನಲ್ಲಿ ನಡೆಯಲಿದ್ದು, ಲಾಸ್‌ ಏಂಜಲೀಸ್‌ನಲ್ಲಿ 2028ರ, ಆಸ್ಟ್ರೇಲಿಯಾದ ಬ್ರಿಸ್ಬೇನ್‌ 2032ರ ಕ್ರೀಡಾಕೂಟ ಆಯೋಜಿಸಲಿದೆ. 2036ರ ಒಲಿಂಪಿಕ್ಸ್‌ ಆಯೋಜನೆಗೆ ಭಾರತದ ಜೊತೆಗೆ ಪೋಲೆಂಡ್‌, ಇಂಡೋನೇಷ್ಯಾ, ಮೆಕ್ಸಿಕೋ ಕೂಡಾ ಪ್ರಯತ್ನ ನಡೆಸುತ್ತಿದೆ.

2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ ಬಗ್ಗೆ ಪ್ರಧಾನಿ ಮೋದಿ ಹರ್ಷ

ನವದೆಹಲಿ: 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರಿ 5 ಕ್ರೀಡೆಗಳ ಸೇರ್ಪಡೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಮವಾರ ಟ್ವೀಟ್‌ ಮಾಡಿರುವ ಅವರು, ‘2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌, ಬೇಸ್‌ಬಾಲ್‌-ಸಾಫ್ಟ್‌ಬಾಲ್‌, ಫ್ಲಾಗ್‌ ಫುಟ್ಬಾಲ್‌, ಲ್ಯಾಕ್ರೋಸ್‌(ಸಿಕ್ಸಸ್‌) ಹಾಗೂ ಸ್ಕ್ವ್ಯಾಶ್‌ ಕ್ರೀಡೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದು ಕ್ರೀಡಾಭಿಮಾನಿಗಳಿಗೆ ಸಂತಸದ ಸುದ್ದಿ. ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿರುವ ಕ್ರಿಕೆಟ್‌ಅನ್ನು ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಿದ್ದನ್ನು ಕ್ರಿಕೆಟ್‌ ಪ್ರೀತಿಸುವ ದೇಶವಾಗಿ ನಾವು ವಿಶೇಷವಾಗಿ ಸ್ವಾಗಿತಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಶಾಂಘೈ ಓಪನ್‌ನಲ್ಲಿ ಬೋಪಣ್ಣ ರನ್ನರ್‌-ಅಪ್‌

ಶಾಂಘೈ: ಭಾರತದ ಹಿರಿಯ ಟೆನಿಸಿಗ ರೋಹನ್‌ ಬೋಪಣ್ಣ ಶಾಂಘೈ ಮಾಸ್ಟರ್ಸ್‌ ಎಟಿಪಿ ಟೆನಿಸ್‌ ಟೂರ್ನಿಯಲ್ಲಿ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಕರ್ನಾಟಕದ 43 ವರ್ಷದ ಬೋಪಣ್ಣ, ಭಾನುವಾರ ಫೈನಲ್‌ನಲ್ಲಿ ಸ್ಪೇನ್‌ನ ಮಾರ್ಸೆಲ್‌-ಅರ್ಜೆಂಟೀನಾದ ಹೊರಾಕಿಯೋ ವಿರುದ್ಧ 7-5, 2-6, 7-10 ಅಂತರದಲ್ಲಿ ಪರಾಭವಗೊಂಡರು. ಮೊದಲ ಸೆಟ್‌ನಲ್ಲಿ ಬೋಪಣ್ಣ-ಎಬ್ಡೆನ್‌ ಗೆಲುವು ಸಾಧಿಸಿದರೂ ಬಳಿಕ ಪುಟಿದೆದ್ದ ಸ್ಪೇನ್‌-ಅರ್ಜೆಂಟೀನಾ ಜೋಡಿ ಪ್ರಶಸ್ತಿ ತಮ್ಮದಾಗಿಸಿಕೊಂಡಿತು.
 

Follow Us:
Download App:
  • android
  • ios