ಶುಕ್ರವಾರದಿಂದ ಪಂದ್ಯಗಳು ಆರಂಭವಾಗಲಿದ್ದು, 14 ಆಟಗಾರರ ಭಾರತ ತಂಡಕ್ಕೆ ಅಜಯ್ ಠಾಕೂರ್ ನಾಯಕರಾಗಿದ್ದು, ಸುರ್ಜಿತ್ ಸಿಂಗ್ ಉಪನಾಯಕರಾಗಿದ್ದಾರೆ.
ಗೊರ್ಗಾನ್ (ನ.23): 10ನೇ ಏಷ್ಯನ್ ಪುರುಷರ ಕಬಡ್ಡಿ ಮತ್ತು 5ನೇ ಏಷ್ಯನ್ ಮಹಿಳೆಯರ ಕಬಡ್ಡಿ ಚಾಂಪಿಯನ್'ಶಿಪ್'ಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. 4 ದಿನಗಳ ಕಾಲ ನಡೆಯಲಿರುವ ಚಾಂಪಿಯನ್'ಶಿಪ್'ನಲ್ಲಿ 24 ರಿಂದ ಪ್ರಮುಖ ಹಂತದ ಪಂದ್ಯಗಳು ನಡೆಯಲಿವೆ. ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 10 ತಂಡಗಳು ಪ್ರಶಸ್ತಿಗಾಗಿ ಸೆಣಸಲು ಸಜ್ಜಾಗಿವೆ.
ಭಾರತ, ಇರಾನ್, ಜಪಾನ್, ದಕ್ಷಿಣ ಕೊರಿಯಾ, ಪಾಕಿಸ್ತಾನ, ಥಾಯ್ಲೆಂಡ್, ಇರಾಕ್, ಆಫ್ಘಾನಿಸ್ತಾನ, ಶ್ರೀಲಂಕಾ ಮತ್ತು ಟರ್ಕ್‌ಮೇನಿಸ್ತಾನ ರಾಷ್ಟ್ರಗಳ ಪುರುಷ ಮತ್ತು ಮಹಿಳಾ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ.
ಭಾನುವಾರ ಪಂದ್ಯಾವಳಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಬದ್ಧ ವೈರಿಗಳಾದ ಭಾರತ, ಪಾಕಿಸ್ತಾನ ಮೊದಲ ಗುಂಪಿನಲ್ಲಿದೆ. ಜತೆಯಲ್ಲಿ ಜಪಾನ್, ಇರಾಕ್ ಮತ್ತು ಆಫ್ಘಾನಿಸ್ತಾನ ತಂಡಗಳಿದ್ದರೆ, 2ನೇ ಗುಂಪಿನಲ್ಲಿ ಇರಾನ್, ದಕ್ಷಿಣ ಕೊರಿಯಾ, ಶ್ರೀಲಂಕಾ, ಥಾಯ್ಲೆಂಡ್ ಮತ್ತು ಟರ್ಕ್‌ಮೇನಿಸ್ತಾನ ತಂಡಗಳಿವೆ.
ಇರಾನ್ ತಲುಪಿದ ಭಾರತ: ಬುಧವಾರ ಭಾರತ ಪುರುಷ ಮತ್ತು ಮಹಿಳೆಯರ ತಂಡಗಳು ಇರಾನ್ ತಲುಪಿವೆ.
ಶುಕ್ರವಾರದಿಂದ ಪಂದ್ಯಗಳು ಆರಂಭವಾಗಲಿದ್ದು, 14 ಆಟಗಾರರ ಭಾರತ ತಂಡಕ್ಕೆ ಅಜಯ್ ಠಾಕೂರ್ ನಾಯಕರಾಗಿದ್ದು, ಸುರ್ಜಿತ್ ಸಿಂಗ್ ಉಪನಾಯಕರಾಗಿದ್ದಾರೆ. ಇನ್ನೂ ಮಹಿಳೆಯರ ತಂಡಕ್ಕೆ ಅಭಿಲಾಷ ಮಾತ್ರೆ ನಾಯಕಿಯಾಗಿದ್ದಾರೆ.
ಭಾರತಕ್ಕೆ ಇರಾಕ್ ಸವಾಲು: ಪುರುಷರ ವಿಭಾಗದ ಲೀಗ್ ಹಂತದಲ್ಲಿ ಭಾರತ, ಇರಾಕ್ ವಿರುದ್ಧ ಮೊದಲ ಪಂದ್ಯವನ್ನಾಡಲಿದ್ದು, ಭಾರತೀಯ ಕಾಲಮಾನದ ಪ್ರಕಾರ
ಶುಕ್ರವಾರ ಬೆಳಗ್ಗೆ 10ಕ್ಕೆ ಪಂದ್ಯ ನಡೆಯಲಿದೆ. ಶನಿವಾರ ಬೆಳಗ್ಗೆ 10ಕ್ಕೆ ಆಫ್ಘಾನಿಸ್ತಾನ, ಸಂಜೆ 4ಕ್ಕೆ ಜಪಾನ್ ಹಾಗೂ ರಾತ್ರಿ 7ಕ್ಕೆ ಪಾಕಿಸ್ತಾನ ವಿರುದ್ಧ ಪಂದ್ಯವನ್ನಾಡಲಿದೆ.
ಮಹಿಳೆಯರ ವಿಭಾಗದಲ್ಲಿ ಭಾರತ ಶುಕ್ರವಾರ ಸಂಜೆ 4ಕ್ಕೆ ಚೈನೀಸ್ ತೈಪೆ ವಿರುದ್ಧ ಮೊದಲು ಸೆಣಸಾಟ ನಡೆಸಿದರೆ, 8.30ಕ್ಕೆ ಥಾಯ್ಲೆಂಡ್ ಜತೆ ಹೋರಾಡಲಿದೆ.
