ಏಷ್ಯನ್ ಗೇಮ್ಸ್‌ನ ಮಹಿಳಾ ಕಬಡ್ಡಿ ಫೈನಲ್‌ನಲ್ಲಿ ಇರಾನ್ ತಂಡವನ್ನು ಮಣಿಸಿದ ಭಾರತ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದ್ದು, ಪದಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ. ಪುರುಷರ ಕಬಡ್ಡಿ ತಂಡ ಕೂಡ ಫೈನಲ್‌ನಲ್ಲಿ ಇರಾನ್ ಎದುರಿಸಲಿದೆ.

ನಗೋಯಾ (ಜಪಾನ್): ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಏಳನೇ ದಿನದಂದು ಮಹಿಳಾ ಕಬಡ್ಡಿಯಲ್ಲಿ ಭಾರತ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. ಫೈನಲ್ ಪಂದ್ಯದಲ್ಲಿ ಇರಾನ್ ನೀಡಿದ ಕಠಿಣ ಪೈಪೋಟಿಯನ್ನು ಮೆಟ್ಟಿ ನಿಂತ ಭಾರತದ ವನಿತೆಯರು ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯದಲ್ಲಿ ಭಾರತ 37-34 ಅಂಕಗಳ ಅಂತರದಿಂದ ಇರಾನ್ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲಿ ಎರಡೂ ತಂಡಗಳು 19-19 ಅಂಕಗಳೊಂದಿಗೆ ಸಮಬಲದ ಹೋರಾಟ ನೀಡಿದ್ದವು. ಆದರೆ ದ್ವಿತೀಯಾರ್ಧದಲ್ಲಿ ಭಾರತೀಯ ಆಟಗಾರ್ತಿಯರು ರೂಪಿಸಿದ ತಂತ್ರಗಳು ಹಾಗೂ ನಿರ್ಣಾಯಕ 'ಆಲ್-ಔಟ್'ಗಳು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ನೆರವಾದವು.

ಕ್ಯಾಪ್ಟನ್ ಪುಷ್ಪಾ ರಾಣಾ ಅವರ ರೈಡಿಂಗ್ ಹಾಗೂ ಡಿಫೆಂಡರ್‌ಗಳ ಸಮಯೋಚಿತ ಟ್ಯಾಕ್ಲಿಂಗ್ ಕೊನೆಯ ಕ್ಷಣದಲ್ಲಿ ಭಾರತಕ್ಕೆ ಗೆಲುವು ಖಚಿತಪಡಿಸಿತು. ಕಬಡ್ಡಿಯಲ್ಲಿ ಬಂದ ಈ ಬಂಗಾರದೊಂದಿಗೆ, ಪ್ರಸ್ತುತ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ ಮೂರಕ್ಕೇರಿದೆ. ಇಂದು ಪುರುಷರ ಕಬಡ್ಡಿ ತಂಡ ಕೂಡ ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯುತ್ತಿದ್ದು, ಫೈನಲ್‌ನಲ್ಲಿ ಅವರಿಗೂ ಇರಾನ್ ತಂಡವೇ ಎದುರಾಳಿಯಾಗಿದೆ.

Scroll to load tweet…

ಪದಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿ ಮುಂದುವರೆದ ಭಾರತ

ಇದಕ್ಕೂ ಮುನ್ನ ಪುರುಷರ ಮ್ಯಾರಥಾನ್‌ನಲ್ಲಿ ಸಾವನ್ ಬರ್ವಾಲ್ ಹಾಗೂ ಶೂಟಿಂಗ್‌ನಲ್ಲಿ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದು ಮಿಂಚಿದ್ದರು. ಇದೀಗ ಕಬಡ್ಡಿಯಲ್ಲಿ ಒಲಿದ ಚಿನ್ನದೊಂದಿಗೆ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. 3 ಚಿನ್ನ, 11 ಬೆಳ್ಳಿ ಹಾಗೂ 13 ಕಂಚಿನ ಪದಕಗಳೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲೇ ಮುಂದುವರಿದಿದೆ.

ಇನ್ನು 105 ಚಿನ್ನ, 39 ಬೆಳ್ಳಿ ಹಾಗೂ 25 ಕಂಚು ಸೇರಿ ಒಟ್ಟು 169 ಪದಕಗಳನ್ನು ಗೆದ್ದಿರುವ ಚೀನಾ ಅಗ್ರಸ್ಥಾನದಲ್ಲಿದೆ. 30 ಚಿನ್ನದೊಂದಿಗೆ 120 ಪದಕ ಗೆದ್ದಿರುವ ಜಪಾನ್ ಎರಡನೇ ಸ್ಥಾನದಲ್ಲಿದ್ದರೆ, 13 ಚಿನ್ನ ಸೇರಿ 69 ಪದಕಗಳನ್ನು ಹೊಂದಿರುವ ದಕ್ಷಿಣ ಕೊರಿಯಾ ಮೂರನೇ ಸ್ಥಾನದಲ್ಲಿದೆ.

ಶಾಟ್‌ಪುಟ್‌: ಮನ್‌ಪ್ರೀತ್‌ಗೆ ಕಂಚು

ಅಥ್ಲೆಟಿಕ್ಸ್‌ನ ಮಹಿಳೆಯರ ಶಾಟ್‌ಪುಟ್‌ನಲ್ಲಿ ಭಾರತದ ಮನ್‌ಪ್ರೀತ್‌ ಕೌರ್‌ ಕಂಚಿನ ಪದಕ ಗೆದ್ದಿದ್ದಾರೆ. ಶುಕ್ರವಾರ ಅವರು 17.17 ಮೀ. ದೂರ ದಾಖಲಿಸಿ ಸ್ಪರ್ಧೆಯಲ್ಲಿ 3ನೇ ಸ್ಥಾನಿಯಾದರು. ಚೀನಾದ ಸೊಂಗ್‌ ಜಿಯಾಯುನ್‌(19.40 ಮೀ.) ಚಿನ್ನ, ಝಾಂಗ್‌ ಲಿನ್‌ರು(18.14 ಮೀ.) ಬೆಳ್ಳಿ ಪಡೆದರು.

ಟೇಬಲ್‌ ಟೆನಿಸ್‌: ದಿಯಾ- ಮನುಶ್‌ ಜೋಡಿಗೆ ಕಂಚು

ಕ್ರೀಡಾಕೂಟದ ಟೇಬಲ್‌ ಟೆನಿಸ್‌ನಲ್ಲಿ ಮನುಶ್‌ ಶಾ ಹಾಗೂ ದಿಯಾ ಚಿಟಾಲೆ ಕಂಚಿನ ಪದಕ ಗೆದ್ದಿದ್ದಾರೆ. ಮಿಶ್ರ ಬಡಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಈ ಜೋಡಿ ಚೀನಾದ ವಾಂಗ್‌ ಚುಖಿನ್‌-ಸುನ್‌ ಯಿಂಗ್‌ಶಾ ವಿರುದ್ಧ 0-4 ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಇದು ಏಷ್ಯಾಡ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ 2ನೇ ಪದಕ. 2018ರಲ್ಲಿ ಶರತ್‌ ಕಮಾಲ್‌-ಮನಿಕಾ ಬಾತ್ರಾ ಕಂಚು ಗೆದ್ದಿದ್ದರು.