Asian Games 2023: ರೋಯಿಂಗ್‌ನಲ್ಲಿ ಮತ್ತೆರಡು ಕಂಚು
ಸೋಮವಾರ ಮೆನ್ಸ್ ಫೋರ್ ವಿಭಾಗದಲ್ಲಿ ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನೀತ್ ಕುಮಾರ್, ಆಶೀಶ್ ಅವರಿದ್ದ ತಂಡ 6 ನಿಮಿಷ 10.81 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 3ನೇ ಸ್ಥಾನ ಪಡೆಯಿತು. ಉಜ್ಬೇಕಿಸ್ತಾನ ಚಿನ್ನ, ಚೀನಾ ಬೆಳ್ಳಿ ಪದಕ ಗೆದ್ದಿತು.
ಹಾಂಗ್ಝೋ(ಸೆ.26): ರೋಯಿಂಗ್‌ನಲ್ಲಿ ಅಭೂತಪೂರ್ವ ಪ್ರದರ್ಶನ ತೋರಿದ ಭಾರತೀಯರು ಮತ್ತೆರಡು ಕಂಚಿನ ಪದಕ ಬಾಚಿಕೊಂಡಿದ್ದಾರೆ. ಇದರೊಂದಿಗೆ ಈ ಬಾರಿ 2 ಬೆಳ್ಳಿ, 3 ಕಂಚು ಸೇರಿ ಒಟ್ಟು 5 ಪದಕದೊಂದಿಗೆ ಅಭಿಯಾನ ಕೊನೆಗೊಳಿಸಿದರು. 2010ರಲ್ಲೂ ಭಾರತೀಯ ರೋವರ್‌ಗಳು 5 ಪದಕ ಗೆದ್ದಿದ್ದರು. ಕಳೆದ ಆವೃತ್ತಿಯಲ್ಲಿ ಭಾರತಕ್ಕೆ 3 ಪದಕ ದೊರೆತಿತ್ತು.
ಸೋಮವಾರ ಮೆನ್ಸ್ ಫೋರ್ ವಿಭಾಗದಲ್ಲಿ ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನೀತ್ ಕುಮಾರ್, ಆಶೀಶ್ ಅವರಿದ್ದ ತಂಡ 6 ನಿಮಿಷ 10.81 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 3ನೇ ಸ್ಥಾನ ಪಡೆಯಿತು. ಉಜ್ಬೇಕಿಸ್ತಾನ ಚಿನ್ನ, ಚೀನಾ ಬೆಳ್ಳಿ ಪದಕ ಗೆದ್ದಿತು. ಇದೇ ವೇಳೆ ಪುರುಷರ ಕ್ವಾಡ್ರಪಲ್ ಸ್ಕಲ್ಸ್ ವಿಭಾಗದಲ್ಲಿ ಸತ್ನಾಮ್ ಸಿಂಗ್, ಪರ್ಮಿಂದರ್ ಸಿಂಗ್, ಜಾಕರ್ ಖಾನ್, ಸುಕ್‌ಮೀತ್ ಅವರನ್ನೊಳಗೊಂಡ ತಂಡ 6 ನಿಮಿಷ 08.61 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚ ತಮ್ಮದಾಗಿಸಿಕೊಂಡಿತು. ಚೀನಾ ಚಿನ್ನ, ಉಜ್ಬೇಕಿಸ್ತಾನ ಬೆಳ್ಳಿ ಗೆದ್ದಿತು.
ವುಶು: ರೋಶಿಬೀನಾಗೆ ಕನಿಷ್ಠ ಕಂಚು ಖಚಿತ!
ಹಾಂಗ್‌ಝೋ: ಭಾರತಕ್ಕೆ ಏಷ್ಯಾಡ್‌ನಲ್ಲಿ ಮತ್ತೊಂದು ಪದಕ ಖಚಿತವಾಗಿದೆ. ಮಹಿಳೆಯರ ವುಶು 60 ಕೆ.ಜಿ. ವಿಭಾಗದಲ್ಲಿ ರೋಶಿಬೀನಾ ದೇವಿ ಸೆಮಿಫೈನಲ್ ಪ್ರವೇಶಿಸಿದ್ದು, ಕನಿಷ್ಠ ಕಂಚಿನ ಪದಕ ಖಚಿತವಾಗಿದೆ. ಕ್ವಾರ್ಟರ್ ಫೈನಲ್‌ನಲ್ಲಿ ರೋಶಿಬೀನಾ ಕಜಕಸ್ತಾನದ ಐಮನ್ ಕರ್ಶಾಗ್ಯ ಸುಲಭ ಗೆಲುವು ಸಾಧಿಸಿದರು. ಕಳೆದ ಆವೃತ್ತಿಯಲ್ಲಿ ರೋಶಿಬೀನಾ ಕಂಚಿನ ಪದಕ ಜಯಿಸಿದ್ದರು.
Asian Games 2023: ಚೀನಾದಲ್ಲಿ ಲಂಕಾ ದಹನ, ಚಿನ್ನ ಗೆದ್ದು ಬೀಗಿದ ಮಹಿಳಾ ಟೀಂ ಇಂಡಿಯಾ
ಜಿಮ್ನಾಸ್ಟಿಕ್ಸ್: ವಾಲ್ಟ್ ಫೈನಲ್‌ಗೆ ಪ್ರಣತಿ
ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ಕ್ರೀಡಾಪಟು ಪ್ರಣತಿ ನಾಯ್ಕ್ ಮಹಿಳೆಯರ ವಾಲ್ಟ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ಸರಾಸರಿ 12.716 ಅಂಕ ಕಲೆಹಾಕಿದ ಪ್ರಣತಿ, 6ನೇ ಸ್ಥಾನ ಪಡೆದು ಫೈನಲ್‌ಗೇರಿದರು. ಫೈನಲ್ ಸ್ಪರ್ಧೆಯು ಸೆ.28ರಂದು ನಡೆಯಲಿದೆ.
ಈಜು: ಶ್ರೀಹರಿಗೆ 6ನೇ ಸ್ಥಾನ
ಹಾಂಗ್‌ಝೋ: ಭಾರತದ ತಾರಾ ಈಜುಪಟು, ಕರ್ನಾಟಕದ ಶ್ರೀಹರಿ ನಟರಾಜ್ ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯ ಫೈನಲ್‌ನಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟರು. 2 ದಿನಗಳಲ್ಲಿ 2 ಫೈನಲ್‌ಗಳಲ್ಲಿ ಸ್ಪರ್ಧಿಸಿದ ಶ್ರೀಹರಿ, ಪದಕ ಗೆಲ್ಲಲು ವಿಫಲರಾದರು. ಭಾನುವಾರ 100 ಮೀ. ಬ್ಯಾಕ್‌ಸ್ಟ್ರೋಕ್ ಫೈನಲ್‌ನಲ್ಲೂ ಶ್ರೀಹರಿ 6ನೇ ಸ್ಥಾನ ಪಡೆದಿದ್ದರು.
ಕೊನೆಗೂ ಪಾಕಿಸ್ತಾನ ತಂಡಕ್ಕೆ ವೀಸಾ ಅನುಮತಿಸಿದ ಕೇಂದ್ರ, ಸೆ.27ಕ್ಕೆ ಭಾರತಕ್ಕೆ ಆಗಮನ!
50 ಮೀ. ಬ್ಯಾಕ್‌ಸ್ಟ್ರೋಕ್‌ನ ಫೈನಲ್‌ನಲ್ಲಿ ಶ್ರೀಹರಿ 25.39 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಅವರ ವೈಯಕ್ತಿಕ ಶ್ರೇಷ್ಠ 24.40 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದ್ದರೆ ಕಂಚಿನ ಪದಕ ದೊರೆಯುತ್ತಿತ್ತು. 100 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ರಾಜ್ಯದ ಲಿಖಿತ್ ಎಸ್.ಪಿ. 7ನೇ ಸ್ಥಾನ ಪಡೆದರೆ, 4X200 ಮೀ. ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಭಾರತ ತಂಡ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ಇದೇ ವೇಳೆ ಕರ್ನಾಟಕದ ದಿನಿಧಿ (ಮಹಿಳೆಯರ 200 ಮೀ. ಫ್ರೀಸ್ಟೈಲ್), ಹಾಶಿಕಾ ರಾಮಚಂದ್ರ (ಮಹಿಳೆಯರ 200 ಮೀ. ವೈಯಕ್ತಿಕ ಮೆಡ್ಲೆ) ಸ್ಪರ್ಧೆಗಳಲ್ಲಿ ಫೈನಲ್‌ಗೇರಲು ವಿಫಲರಾದರು.