ಏಷ್ಯನ್ ಗೇಮ್ಸ್: ಮುಂದುವರೆದ ಶೂಟರ್’ಗಳ ಪದಕ ಬೇಟೆ; ಭಾರತಕ್ಕೆ ಮತ್ತೊಂದು ಬೆಳ್ಳಿ
ಶೂಟಿಂಗ್’ನ ಎರಡನೇ ಹಂತದಲ್ಲೇ ಮುನ್ನಡೆ ಸಾಧಿಸುತ್ತಾ ಸಾಗಿದ 37 ವರ್ಷದ ಸಂಜೀವ್ ಕೊನೆಗೂ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ರಸ್ಥಾನದಲ್ಲಿ ಮುನ್ನುಗ್ಗುತ್ತಿದ್ದ, ಚೀನಾದ ಶೂಟರ್ ಯಂಗ್ ಹರೋನ್ ಕೊನೆಯಲ್ಲಿ ಎಡವಟ್ಟು ಮಾಡಿಕೊಂಡು ಪದಕ ವಂಚಿತರಾದರು.
ಜಕಾರ್ತ[ಆ.21]: 18ನೇ ಏಷ್ಯನ್ ಗೇಮ್ಸ್’ನಲ್ಲಿ ಭಾರತದ ಶೂಟರ್’ಗಳು ಪದಕದ ಬೇಟೆ ಮುಂದುವರೆಸಿದ್ದು, ಪುರುಷರ 50 ಮೀಟರ್ಸ್ ರೈಫಲ್ ವಿಭಾಗದಲ್ಲಿ ಹರಿಯಾಣ ಮೂಲದ ಸಂಜೀವ್ ರಜಪೂತ್ ಬೆಳ್ಳಿ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 8ಕ್ಕೇ ಏರಿಕೆಯಾಗಿದೆ.
ಶೂಟಿಂಗ್’ನ ಎರಡನೇ ಹಂತದಲ್ಲೇ ಮುನ್ನಡೆ ಸಾಧಿಸುತ್ತಾ ಸಾಗಿದ 37 ವರ್ಷದ ಸಂಜೀವ್ ಕೊನೆಗೂ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ರಸ್ಥಾನದಲ್ಲಿ ಮುನ್ನುಗ್ಗುತ್ತಿದ್ದ, ಚೀನಾದ ಶೂಟರ್ ಯಂಗ್ ಹರೋನ್ ಕೊನೆಯಲ್ಲಿ ಎಡವಟ್ಟು ಮಾಡಿಕೊಂಡು ಪದಕ ವಂಚಿತರಾದರು.
ಈಗಾಗಲೇ ಶೂಟಿಂಗ್’ನಲ್ಲಿ 10 ಮೀಟರ್ ಏರ್’ರೈಫಲ್ಸ್ ಮಿಶ್ರ ವಿಭಾಗದಲ್ಲಿ ರವಿಕುಮಾರ್-ಅಪೂರ್ವಿ ಚಾಂಡಿಲಾ ಜೋಡಿ ಕಂಚಿನೊಂದಿಗೆ ಪದಕದ ಖಾತೆ ತೆರೆದಿದ್ದರು. ಆ ಬಳಿಕ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ದೀಪಕ್ ಕುಮಾರ್ ಬೆಳ್ಳಿ, ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಲಕ್ಷಯ್ ಶೆರೋನ್ ಬೆಳ್ಳಿ ಜಯಿಸಿದ್ದರು. ಇಂದು 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ಚೌಧರಿ ಚಿನ್ನ, ಅಭಿಷೇಕ್ ವರ್ಮಾ ಕಂಚು ಗೆದ್ದಿದ್ದಾರೆ. ಇದೀಗ ಸಂಜೀವ್ ರಜತಕ್ಕೆ ಮುತ್ತಿಕ್ಕಿದ್ದಾರೆ. ಒಟ್ಟು 8 ಪದಕಗಳ ಪೈಕಿ ಒಂದು ಚಿನ್ನ ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳು ಶೂಟಿಂಗ್ ವಿಭಾಗದಿಂದಲೇ ಬಂದಿವೆ.