ಭುವನೇಶ್ವರ[ಆ.28]: 18ನೇ ಏಷ್ಯನ್ ಗೇಮ್ಸ್‌ನ 100 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ ಓಟಗಾರ್ತಿ ದ್ಯುತಿ ಚಾಂದ್‌ಗೆ ಒಡಿಶಾ ಸರ್ಕಾರ ₹ 1.5 ಕೋಟಿ ನಗದು ಬಹುಮಾನ ಘೋಷಿಸಿದೆ. ಒಡಿಶಾ ಒಲಿಂಪಿಕ್ ಸಂಸ್ಥೆ ಸಹ 50 ಸಾವಿರ ಬಹುಮಾನ ನೀಡುವುದಾಗಿ ಹೇಳಿದೆ. 

ಭಾನುವಾರ ನಡೆದ 100 ಮೀ. ಫೈನಲ್‌ನಲ್ಲಿ 11.32 ಸೆ.ನಲ್ಲಿ ಗುರಿ ತಲುಪುವ ಮೂಲಕ ದ್ಯುತಿ ಬೆಳ್ಳಿ ಗೆದ್ದಿದ್ದರು. ಸೋಮವಾರ ಬಹುಮಾನ ಘೋಷಿಸಿದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ‘ಏಷ್ಯನ್ ಗೇಮ್ಸ್‌ನಲ್ಲಿ 20 ವರ್ಷದ ಬಳಿಕ 100 ಮೀ. ಓಟದಲ್ಲಿ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ದ್ಯುತಿ ಸಾಧನೆ ಅದ್ವೀತಿಯ’ ಎಂದಿದ್ದಾರೆ.

ದ್ಯುತಿ ಚಾಂದ್ 100 ಮೀಟರ್ ಓಟದಲ್ಲಿ 11.32 ಸೆಕೆಂಡ್’ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಜಯಿಸಿದರು. ಕೇವಲ 0.02 ಸೆಕೆಂಡ್’ಗಳಿಂದ ಚಿನ್ನದ ಪದಕದಿಂದ ವಂಚಿತರಾದರು. ಇಂದು ದ್ಯುತಿ ಚಾಂದ್ 200 ಮೀಟರ್ ಓಟದಲ್ಲಿ ಸ್ಪರ್ಧಿಸುತ್ತಿದ್ದು, ಸೆಮಿಫೈನಲ್ ಪ್ರವೇಶಿಸಿದ್ದಾರೆ.