Asianet Suvarna News Asianet Suvarna News

18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟ- ಭಾರತದ ಸರ್ವಶ್ರೇಷ್ಠ ಪ್ರದರ್ಶನ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಸರ್ವಶ್ರೇಷ್ಠ ಪ್ರದರ್ಶನ ನೀಡೋ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವೈಯುಕ್ತಿಕ ಸ್ಪರ್ಧೆಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಆದರೆ ಕಬಡ್ಡಿ, ಹಾಕಿ ಸೇರಿದಂತೆ ಹಲವು ವಿಭಾಗಗಳಲ್ಲಿ ಭಾರತ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲಾವಾಗಿದೆ. ಇಲ್ಲಿದೆ ಈ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ರದರ್ಶನ.

Asian games 2018 Indian athletics top show and world record
Author
Bengaluru, First Published Sep 3, 2018, 10:17 AM IST

ಜಕರ್ತಾ(ಸೆ.03): 18 ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಭಾನುವಾರ ತೆರೆ ಬಿದ್ದಿದೆ. 16  ದಿನಗಳ ಕಾಲ 45 ದೇಶಗಳ ಸುಮಾರು 11 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು 40 ಕ್ರೀಡೆಗಳಲ್ಲಿ 465 ಸ್ಪರ್ಧೆಗಳಲ್ಲಿ ಸೆಣಸಿ ಪದಕ ಬೇಟೆಯಾಡಿದ್ದಾರೆ. ಎಂದಿನಂತೆ ಚೀನಾ, ಜಪಾನ್, ದಕ್ಷಿಣ ಕೊರಿಯಾ ದೇಶಗಳು ಮುಂಚೂಣಿಯ ಪ್ರದರ್ಶನ ನೀಡಿದ್ದರೆ, ಭಾರತ ತನ್ನ ಪದಕ ಗಳಿಕೆಯಲ್ಲಿ ಐತಿಹಾಸಿಕ ಸರ್ವಶ್ರೇಷ್ಠ ಸಾಧನೆ ಮಾಡಿದೆ. 

ಕ್ರೀಡಾದೈತ್ಯ ಚೀನಾಕ್ಕೆ ಹೋಲಿಸಿದರೆ ಇದು ಏನೇನು ಅಲ್ಲದಿದ್ದರೂ, ಭಾರತ ದಲ್ಲಿ ಕ್ರೀಡೆಗೆ ಈ ಹಿಂದೆ ಸಿಗುತ್ತಿದ್ದ ಪ್ರೋತ್ಸಾಹಕ್ಕೆ ಹೋಲಿಸಿದರೆ ಈ ಬಾರಿಯ ಪ್ರದರ್ಶನ ಶ್ಲಾಘನೀಯವೇ. ವಿಶೇಷವೆಂದರೆ, ಭಾರತದ ಸಾರ್ವಕಾಲಿಕ ಶ್ರೇಷ್ಠ ಪದಕ ಗಳಿಕೆಗೆ ಪ್ರಮುಖ ಕಾರಣವಾದದ್ದು ವೈಯಕ್ತಿಕ ಸ್ಪರ್ಧಿಗಳು, ಅದರಲ್ಲೂ ಪ್ರಮುಖವಾಗಿ ಅಥ್ಲೆಟಿಕ್ಸ್. 

ಜಿನ್ಸನ್ ಜಾನ್ಸನ್, ದ್ಯುತಿ ಚಾಂದ್, ಹಿಮಾ ದಾಸ್ ರಂಥವರು ಒಬ್ಬರೇ ಎರಡು-ಮೂರು ಪದಕಗಳನ್ನು ಬಾಚಿದ್ದರೆ, ನೀರಜ್ ಚೋಪ್ರಾ, ಸ್ವಪ್ನಾ ಬರ್ಮನ್ ರಂತಹ ಅಥ್ಲೀಟ್‌ಗಳು ಹೊಸ ಭರವಸೆ ಮೂಡಿಸಿದ್ದಾರೆ. ಇದಲ್ಲದೇ ವುಶು, ಸೆಪಕ್ ತಕ್ರಾ, ಕುರಾಶ್ ನಂತಹ ಪೌರ್ವಾತ್ಯ ದೇಶಗಳ ಆಟಗಳಲ್ಲೂ ಪದಕ ಗೆದ್ದದ್ದು ಭಾರತಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್.

ಇದರ ಜೊತೆಗೇ, ಭಾರತಕ್ಕೆ ಸಾಂಪ್ರದಾಯಿಕವಾಗಿ ಏಷ್ಯಾಡ್ ಪದಕ ತಂದು ಕೊಡುತ್ತಿದ್ದ ಹಾಕಿ, ಕಬಡ್ಡಿ, ಟೆನಿಸ್‌ನಲ್ಲಿ ಒಣಪ್ರತಿಷ್ಠೆ ಬದಿಗೊತ್ತಿ ಇನ್ನಷ್ಟು ಪರಿಶ್ರಮ ಹಾಕಿದ್ದರೆ, ಶೂಟಿಂಗ್, ಕುಸ್ತಿ, ಬಾಕ್ಸಿಂಗ್, ಆರ್ಚರಿಯಲ್ಲಿ ಎಂದಿನ ಸಾಮರ್ಥ್ಯ ಮೆರೆದಿದ್ದರೆ ಭಾರತದ ಪದಕ ಗಳಿಕೆ ನೂರರ ಗಡಿ ದಾಟುತ್ತಿತ್ತೇನೋ. ಈ ಹಿನ್ನೆಲೆಯಲ್ಲಿ ಇದೀಗ ಮುಗಿದ ಏಷ್ಯಾಡ್‌ನಲ್ಲಿ ಭಾರತಕ್ಕೆ ಪ್ಲಸ್ ಹಾಗೂ ಮೈನಸ್ ಆದ ಪ್ರಮುಖ ಅಂಶಗಳ ವಿಶ್ಲೇಷಣೆ ಇಲ್ಲಿ ಮಾಡಲಾಗಿದೆ.

ಅಥ್ಲೆಟಿಕ್ಸ್ ಸೊಬಗು: ಅಚ್ಚರಿಯ ಜತೆಗೆ, ಈ ಬಾರಿ ಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳು ಪದಕ ಪಟ್ಟಿಯಲ್ಲಿ ಅತಿದೊಡ್ಡ ಕೊಡುಗೆ ನೀಡಿದ್ದಾರೆ. 69 ಪದಕಗಳಲ್ಲಿ
ಅಥ್ಲೆಟಿಕ್ಸ್‌ನಿಂದ ಕೊಡುಗೆಯಾಗಿ ಬಂದಿದ್ದು 7 ಚಿನ್ನ, 10 ಬೆಳ್ಳಿ ಹಾಗೂ 2 ಕಂಚು ಸೇರಿ 19 ಎಂಬುದು ಗಮನಾರ್ಹ. 

23 ವರ್ಷದ ತಜೀಂದರ್ ಸಿಂಗ್ ತೋರ್ ಶಾಟ್‌ಪುಟ್‌ನಲ್ಲಿ ದಾಖಲೆಯೊಂದಿಗೆ ಚಿನ್ನ ಗೆಲ್ಲುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಆರಂಭಿಸಿದರು. ಇನ್ನು ತಜೀಂದರ್‌ಗೆ ಸರಿ ಸಮಾನದ ಪ್ರದರ್ಶನ ತೋರಿದ್ದು, ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ. ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿದ್ದ ನೀರಜ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಚಿನ್ನ ಜಯಿಸಿದರು.  ಈ ಮೊದಲು ಕಾಮನ್‌ವೆಲ್ತ್‌ನಲ್ಲೂ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾ, ಇಲ್ಲೂ ಸ್ವರ್ಣ ಸಾಧನೆ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದರು. 

ಎಲ್ಲರ ನಿರೀಕ್ಷೆಯನ್ನು ಮೀರಿ 800 ಮೀ. ಓಟದಲ್ಲಿ ಮಂಜಿತ್ ಸಿಂಗ್ ಚಿನ್ನ ಗೆದ್ದರೆ, ಜಿನ್ಸನ್ ಜಾನ್ಸನ್ ಬೆಳ್ಳಿಗೆ ತೃಪ್ತರಾಗಿದ್ದರು. ಆದರೆ, 1500 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ಜಿನ್ಸನ್ ಜಾನ್ಸನ್ ತಮ್ಮ ಸಾಮರ್ಥ್ಯ ವನ್ನು ಜಗತ್ತಿಗೆ ತೋರಿಸಿಕೊಟ್ಟರು. 4*400 ಮೀ. ರಿಲೇಯಲ್ಲಿ ಸತತ 5ನೇ ಬಾರಿ ಚಿನ್ನ ಗೆಲ್ಲುವ ಮೂಲಕ ಭಾರತೀಯ ಓಟಗಾರ್ತಿಯರು ತಮ್ಮ ಪಾರಮ್ಯ ಮುಂದುವರೆಸಿದರು.

200 ಮೀ. ಹಾಗೂ 100 ಮೀ. ಓಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದ್ಯುತಿಚಾಂದ್ ಐತಿಹಾಸಿಕ ಸಾಧನೆ ಮಾಡಿದರು. ಕಿರಿಯರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಹಿಮಾ ದಾಸ್ ಈ ಬಾರಿಯ ಏಷ್ಯಾಡ್‌ನಲ್ಲಿ 3 ಪದಕಗಳನ್ನು ಕೊರಳಿ ಗೇರಿಸಿಕೊಂಡರು. 400 ಮೀ. ಓಟದಲ್ಲಿ ಬೆಳ್ಳಿ ಗೆದ್ದರೆ, ಮಿಶ್ರ ರಿಲೇಯಲ್ಲಿ ಬೆಳ್ಳಿ, 4*400 ಮೀ. ರಿಲೇಯಲ್ಲಿ ಚಿನ್ನ ಕೊರಳಿಗೇರಿಸಿಕೊಂಡರು.

ನೋವಲ್ಲೂ ಚಿನ್ನ: ಒಂದೆಡೆ ದವಡೆ ನೋವು ಮತ್ತೊಂದೆಡೆ ಎರಡೂ ಪಾದಗಳಲ್ಲಿ ತಲಾ 6 ಬೆರಳು ಇರುವ ಕಾರಣ ಸೂಕ್ತ ಶೂ ಇಲ್ಲದೆಯೂ ಕಣಕ್ಕಿಳಿದ್ದಿದ್ದ ಸ್ವಪ್ನಾ ಬರ್ಮನ್ ಹೆಪ್ಟಾಥ್ಲಾನ್‌ನಲ್ಲಿ ದೇಶಕ್ಕೆ ಮೊದಲ ಚಿನ್ನ ತಂದುಕೊಟ್ಟ ಸಾಧನೆ ಮಾಡಿದರು. 

ಟ್ರಿಜಪಲ್ ಜಂಪ್‌ನಲ್ಲಿ ಅರ್ಪಿಂದರ್ ಸಿಂಗ್ ಸ್ವರ್ಣಕ್ಕೆ ಕೊರಳೊಡ್ಡಿದರೆ, ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ನೀನಾ ವರಕಿಲ್ ರಜತ ಪದಕ ಗೆದ್ದರು. ಧರೂನ್ ಅಯ್ಯಸ್ವಾಮಿ ಪುರುಷರ 400 ಮೀ ಹರ್ಡಲ್ಸ್‌ನಲ್ಲಿ ಬೆಳ್ಳಿಗೆ ಕೊರಳೊಡ್ಡಿದರು. ಧರೂನ್ ಪುರುಷರ ರಿಲೇ ತಂಡದಲ್ಲೂ ಇದ್ದರು ಎಂಬುದು ಮತ್ತೊಂದು ವಿಶೇಷ. ಸುಧಾಸಿಂಗ್ ಮಹಿಳೆಯರ 3000 ಮೀ.ನಲ್ಲಿ ರಜತ ಗೆದ್ದರೆ, ಡಿಸ್ಕಸ್ ಥ್ರೋಪಟು ಸೀಮಾ ಪೂನಿಯಾ ಕಂಚಿಗೆ ತೃಪ್ತರಾದರು. 1500 ಮೀ.ನಲ್ಲಿ ಚಿತ್ರಾ ಕಂಚಿಗೆ ಕೊರಳೊಡ್ಡಿದರು.

ವೈಯಕ್ತಿಕ ಸಾಧನೆಗಳು: ಈ ಬಾರಿಯ ಕೂಟ ಹಲವು ವೈಯಕ್ತಿಕ ಸಾಧನೆಗಳಿಗೆ ಸಾಕ್ಷಿಯಾಯಿತು. ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಈ ಬಾರಿ ಐತಿಹಾಸಿಕ ಸಾಧನೆ ಮಾಡಿ ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಕಂಚು ಗೆಲ್ಲುವ ಮೂಲಕ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಏಷ್ಯಾಡ್‌ನಲ್ಲಿ ಕಂಚು ಗೆದ್ದ ಮೊದಲ ಮಹಿಳಾ ಶಟ್ಲರ್ ಎನಿಸಿದರು.

ಅತ್ತ ಸಿಂಧು ಫೈನಲ್‌ಗೇರಿದ ಮೊದಲ ಶಟ್ಲರ್ ಎಂಬ ಸಾಧನೆ ಬರೆದರು. ಇದರ ಜತೆಗೆ 100 ಹಾಗೂ 200 ಮೀ. ಓಟದಲ್ಲಿ ಒಂದೇ ಆವೃತ್ತಿಯಲ್ಲಿ ಬೆಳ್ಳಿ ಗೆಲ್ಲುವ ಮೂಲಕ ದ್ಯುತಿ ಚಾಂದ್, ಪಿ.ಟಿ.ಉಷಾ ಸಾಧನೆ ಸರಿಗಟ್ಟಿದರು. ಸ್ವಪ್ನಾ, ಹೆಪ್ಟಾಥ್ಲಾನ್‌ನಲ್ಲಿ ಚಿನ್ನದ ಖಾತೆ ತೆರೆದ ಖ್ಯಾತಿ ಪಡೆದರು. ಇದೇ ರೀತಿ ಹಲವು ಕ್ರೀಡಾಪಟುಗಳು ದಾಖಲೆ ನಿರ್ಮಿಸಿದರು.

ಹಾಕಿ ವೈಫಲ್ಯ:  ಗುಂಪು ಹಂತದಲ್ಲಿ 70 ಗೋಲುಗಳ ದಾಖಲಿಸುವ ಮೂಲಕ ದಾಖಲೆ ನಿರ್ಮಿಸಿದ್ದ ಭಾರತ, ಈ ಬಾರಿ ಚಾಂಪಿಯನ್ ಪಟ್ಟ ತನ್ನದೇ ಎಂಬ ಭಾರೀ ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ಈ ಅತಿಯಾದ ಆತ್ಮವಿಶ್ವಾಸವೇ ಭಾರತಕ್ಕೆ ಮುಳುವಾಯ್ತು. ಮಲೇಷ್ಯಾ ವಿರುದ್ಧ ಸೆಮೀಸ್‌ನಲ್ಲಿ ರಕ್ಷಣಾ ವಿಭಾಗದಲ್ಲಿನ ನ್ಯೂನತೆ
ಭಾರತಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿತು.  

ಟೆನಿಸ್‌ನಲ್ಲಿ ಪದಕ ಮಿಸ್:  ದಿಗ್ಗಜ ಆಟಗಾರರನ್ನು ಒಳಗೊಂಡಿದ್ದ ಭಾರತ  ಟೆನಿಸ್ ತಂಡದಿಂದ ಹೆಚ್ಚಿನ ಪದಕಗಳನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ, ತಮಗೆ ಕಿರಿಯ ಜೊತೆಗಾರನ ನೀಡಿದ್ದಾರೆ ಎಂಬ ನೊಪವೊಡ್ಡಿ ಅನುಭವಿ ಆಟಗಾರ ಲಿಯಾಂ ಡರ್ ಪೇಸ್ ಕೊನೆ ಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದರು. ಇದು ತಂಡ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.

ಬಾಕ್ಸಿಂಗ್‌ನಲ್ಲಿ ನಿರಾಸೆ:  ಹೆಚ್ಚು ಪದಕ ನಿರೀಕ್ಷಿಸಿದ್ದ ಬಾಕ್ಸಿಂಗ್‌ನಲ್ಲಿ ಈ ಬಾರಿ ದಕ್ಕಿದ್ದು ಕೇವಲ 1 ಚಿನ್ನ ಮತ್ತು 1 ಕಂಚು ಮಾತ್ರ. 2014 ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಬಾಕ್ಸರ್ ಗಳು 1 ಚಿನ್ನ ಹಾಗೂ 4 ಕಂಚು ಜಯಿಸಿದ್ದರೆ, 2010ರ ಕೂಟದಲ್ಲಿ 2 ಚಿನ್ನ, 3 ಬೆಳ್ಳಿ ಹಾಗೂ 4 ಕಂಚು ಗೆದ್ದು ಪಾರಮ್ಯ ಮೆರೆದಿದ್ದರು. 

ಶೂಟಿಂಗ್‌ನಲ್ಲಿ 2 ಚಿನ್ನ ಸೇರಿ 9 ಪದಕಗಳು ಮಾತ್ರ ಒಲಿದರೂ ಮನು ಭಾಕರ್, ಅನೀಶ್ ಭನ್‌ವಾಲಾ ನಿರಾಸೆ ಮೂಡಿಸಿದರು. ವಿಶ್ವಕಪ್ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆರ್ಚರಿಯಲ್ಲೂ ಬಂದಿದ್ದು ಕೇವಲ 2 ಪದಕಗಳು ಮಾತ್ರ. ಕುಸ್ತಿಯಲ್ಲಿ ಭಜರಂಗ್ ಪೂನಿಯಾ, ವಿನೇಶ್ ಪೊಗಾಟ್ ಚಿನ್ನ ಜಯಿಸಿದರೂ ಇಲ್ಲಿ ಲಭಿಸಿದ್ದು ನಮಗೆ 3 ಪದಕ.

ಪ್ರತಿಷ್ಠೆಗೆ ಕಬಡ್ಡಿ ಬಲಿ: ಏಷ್ಯಾಡ್‌ನಲ್ಲಿ ಕಬಡ್ಡಿ ಪರಿಚಯಗೊಂಡ ದಿನದಿಂದಲೂ ಚಾಂಪಿಯನ್ ಆಗಿದ್ದ ಭಾರತ ಪುರುಷರ ತಂಡ ಈ ಬಾರಿ ಕಂಚಿಗೆ ತೃಪ್ತಿಗೊಂಡು ಭಾರೀ ನಿರಾಸೆ ಮೂಡಿಸಿತು. ಆಟಕ್ಕಿಂತ ವೈಯಕ್ತಿಕ ಪ್ರತಿಷ್ಠೆಯೇ ಆಟಗಾರರಿಗೆ ಮುಖ್ಯವಾಯಿತೇ ಎಂಬ ಪ್ರಶ್ನೆ ಉದ್ಭವಿಸಿತು. ಏಕೆಂದರೆ ಇಡೀ ಕೂಟದಲ್ಲಿ ಕಬಡ್ಡಿ ಆಟಗಾರರು ವರ್ತನೆ ಈ ಅನುಮಾನ ಮೂಡಿಸಿತ್ತು. ಇದರ ಜತೆಗೆ ಆಟಗಾರರ ನಡುವಿನ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿತ್ತು. ಪ್ರೊ ಕಬಡ್ಡಿ ಬಳಿಕ ಕಬಡ್ಡಿಪಟುಗಳಿಗೆ ಬಂದಿರುವ ತಾರಾವರ್ಚಸ್ಸೇ ಇದಕ್ಕೆ ಕಾರಣ ಎಂಬ ಟೀಕೆಗಳು ಕೇಳಿ ಬರುತ್ತಿವೆ.

Follow Us:
Download App:
  • android
  • ios