ಬೆಳಗಾವಿ[ಆ.29] ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಕುಸ್ತಿ ಹಾಗೂ ಜುಡೋ ಕ್ರೀಡೆಯ ಇನ್ನೊಂದು ರೂಪವಾಗಿರುವ ಕುರಾಶ್‌ನಲ್ಲಿ ಬೆಳಗಾವಿಯ ಯುವ ಪ್ರತಿಭೆ ಮಲಪ್ರಭಾ ಜಾಧವ ಮಹಿಳಾ ವಿಭಾಗದ 52 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ದೇಶದ ಗೌರವಕ್ಕೆ ಮತ್ತೊಂದು ಗರಿ ಮೂಡಿಸಿದ್ದಾಳೆ.

ಖೋ-ಖೋದಿಂದ ಕುರಾಶ್‌ಗೆ: ಕಳೆದ 13 ವರ್ಷಗಳಿಂದ ಜುಡೋ ಮತ್ತು ಕುರಾಶ್ ಅಭ್ಯಾಸ ನಡೆಸುತ್ತಿರುವ ಮಲಪ್ರಭಾ ಜಾಧವ (21) ಬೆಳಗಾವಿ ತಾಲೂಕಿನ ವಂಟಮುರಿಯ ರೈತ ಯಲ್ಲಪ್ಪ ಅವರ 5ನೇ ಮಗಳು. ತಾಯಿ ಶೋಭಾ ಗೃಹಿಣಿಯಾಗಿದ್ದರೆ, ಕೃಷಿಯೇ ಇವರ ಇಡೀ ಕುಟುಂಬಕ್ಕೆ ಆಧಾರ. ಹೀಗೆ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯುಳ್ಳ ಮಲಪ್ರಭಾಳಿಗೆ 5ನೇ ತರಗತಿ ವರೆಗೂ ಖೋ-ಖೋ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದಳು. ಆದರೆ, ಈ ವೇಳೆ ಏಕಲವ್ಯ ಪ್ರಶಸ್ತಿ ಪುರಸ್ಕೃತ ಜುಡೋ ಕೋಚ್ ತ್ರಿವೇಣಿ ಜಿತೇಂದ್ರಸಿಂಗ್ ಗರಡಿಗೆ ಬಿದ್ದ ಬಳಿಕಮಲಪ್ರಭಾಳ ಕ್ರೀಡಾಜೀವನದ ದಿಕ್ಕೆ ಬದಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳ ಲೂಟಿ ಶುರುವಾಯಿತು. 

ಜುಡೋದಲ್ಲಿ ವಿಶ್ವ ನಂ. 15: ಜುಡೋ ಮಾದರಿಯಲ್ಲಿ ನಿಂತುಕೊಂಡು ನಡೆಸುವ ಕುಸ್ತಿಯಂತಿರುವ ಕುರಾಶ್ ಕ್ರೀಡೆ ಕಳೆದ 10 ವರ್ಷಗಳ ಹಿಂದೆ ಪರಿಚಯಗೊಂಡಿದೆ. ಜುಡೋ ಮತ್ತು ಕುರಾಶ್‌ನಲ್ಲಿ ಪರಿಣತಿ ಮಿಂಚುತ್ತಿರುವ ಮಲಪ್ರಭಾ ಜುಡೋದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನ ಪಡೆದಿದ್ದರೆ, ಭಾರತದಲ್ಲಿ ಅಗ್ರಸ್ಥಾನ ಹೊಂದಿದ್ದಾಳೆ. 9 ವರ್ಷಗಳಿಂದ ಬೆಳಗಾವಿಯಲ್ಲಿಯೇ ಕುರಾಶ್ ಅಭ್ಯಾಸ ಮಾಡುತ್ತಿದ್ದಾಳೆ. ಇದುವರೆಗೂ 30ಕ್ಕೂ ಹೆಚ್ಚು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು 13 ಚಿನ್ನದ ಪದಕ ಗಳಿಸಿರುವ ಮಲಪ್ರಭಾ, 7 ಅಂತಾರಾಷ್ಟ್ರೀಯ ಜುಡೋ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿವಿಧ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಕುರಾಶ್‌ನಲ್ಲಿ 4 ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಎಲ್ಲದರಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದವಳು.

ತ್ರಿವೇಣಿ ಜಿತೇಂದ್ರ ಸಿಂಗ್ ಸ್ವತಃ ರಾಷ್ಟ್ರೀಯ ಇಂಡಿಯನ್ ಜುಡೋ ಮತ್ತು ಕುರಾಶ್ ಟೀಂಗಳ ತರಬೇತುದಾರರು. 1992ರಲ್ಲಿ ಇವರ ಸಾಧನೆ ಮತ್ತು ತರಬೇತಿ ಗುರುತಿಸಿ ಕೇಂದ್ರ ಸರ್ಕಾರ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದೆ. 2009ರಲ್ಲಿ ಕರ್ನಾಟಕ ಸರ್ಕಾರ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ವರದಿ: ಕಿರಣ ಮಾಸಣಗಿ, ಕನ್ನಡಪ್ರಭ