ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಹಾಲಿ ಚಾಂಪಿಯನ್ ಭಾರತ ಪ್ರಶಸ್ತಿ ಉಳಿಸಿಕೊಳ್ಳಲು ಸಜ್ಜಾಗಿದೆ. ಪ್ರತಿಷ್ಠಿತ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಯಾವಾಗ ಆರಂಭಗೊಳ್ಳಲಿದೆ? ಉದ್ಘಾಟನಾ ಪಂದ್ಯದಲ್ಲಿ ಭಾರತದ ಎದುರಾಳಿ ಯಾರು ಇಲ್ಲಿದೆ ವಿವರ.

ನವದೆಹಲಿ(ಜು.06): ಹಾಕಿ ಚಾಂಪಿಯನ್ಸ್ ಟ್ರೋಫಿ ಬಳಿಕ ಇದೀಗ ಟೀಂ ಇಂಡಿಯಾ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಸಜ್ಜಾಗುತ್ತಿದೆ. ಅಕ್ಟೋಬರ್‌ 18 ರಿಂದ 28 ರವರೆಗೆ ಮಸ್ಕಟ್‌ನಲ್ಲಿ ನಡೆಯಲಿರುವ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ (ಎಸಿಟಿ) ಹಾಕಿ ಟೂರ್ನಿ ವೇಳಾಪಟ್ಟಿಪ್ರಕಟಗೊಂಡಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಭಾರತ, ಆತಿಥೇಯ ಓಮನ್‌ ವಿರುದ್ಧ ಸೆಣಸಲಿದೆ.

ಪಂದ್ಯಾವಳಿಯಲ್ಲಿ ಭಾರತ, ಓಪನ್‌ ಜತೆ ಮಲೇಷ್ಯಾ, ಪಾಕಿಸ್ತಾನ, ದಕ್ಷಿಣ ಕೊರಿಯಾ ಮತ್ತು ಜಪಾನ್‌ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ರೌಂಡ್‌ ರಾಬಿನ್‌ ಹಂತದಲ್ಲಿ ಪ್ರತಿ ತಂಡ ಉಳಿದ 5 ತಂಡಗಳೊಂದಿಗೆ ಸೆಣಸಲಿದೆ. ಅಗ್ರ 4 ತಂಡಗಳು ಸೆಮೀಸ್‌ಗೆ ಅರ್ಹತೆ ಪಡೆದರೆ, ಇನ್ನುಳಿದ 2 ತಂಡಗಳು 5 ಮತ್ತು 6ನೇ ಸ್ಥಾನಕ್ಕಾಗಿ ಸೆಣಸಲಿವೆ.

ಇತ್ತೀಚೆಗೆ ಮುಕ್ತಾಯಗೊಂಡ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು. ಈ ಮೂಲಕ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತ್ತು. ಆದರೆ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹಾಲಿ ಚಾಂಪಿಯನ್ ಭಾರತ ಪ್ರಶಸ್ತಿ ಉಳಿಸಿಕೊಳ್ಳೋ ವಿಶ್ವಾಸದಲ್ಲಿದೆ.