ಭುವನೇಶ್ವರ್: 22ನೇ ಏಷ್ಯನ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಪದಕ ಬೇಟೆ ಮುಂದುವರಿದಿದ್ದು, 2ನೇ ದಿನವಾದ ಶುಕ್ರವಾರ 4 ಚಿನ್ನ ಸೇರಿದಂತೆ ಭಾರತ ಒಟ್ಟು 8 ಪದಕಗಳನ್ನು ಗೆದ್ದುಕೊಂಡಿತು. ಮಹಿಳೆಯರ 400 ಮೀಟರ್ ಓಟದಲ್ಲಿ ನಿರ್ಮಲಾ ಶೇರನ್ 52.01 ಸೆಕೆಂಡ್'ಗಳಲ್ಲಿ ಗುರಿ ತಲುಪಿ ದಿನದ ಮೊದಲ ಚಿನ್ನ ಗೆದ್ದರು. ಇದೇ ಸ್ಪರ್ಧೆಯಲ್ಲಿ ಭಾರತದ ಜಿಸ್ನಾ ಮ್ಯಾಥ್ಯೂ ಕಂಚು ಗೆದ್ದರೆ, ಕರ್ನಾಟಕದ ಪೂವಮ್ಮ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ನಿರ್ಮಲಾ ಚಿನ್ನ ಗೆದ್ದ ಕೇವಲ 5 ನಿಮಿಷಗಳ ಬಳಿಕ ಭಾರತಕ್ಕೆ 4ನೇ ಚಿನ್ನ ಒಲಿಯಿತು. ಪುರುಷರ 400 ಮೀಟರ್ ಓಟದಲ್ಲಿ ಮೊಹಮ್ಮದ್ ಅನಾಸ್ 45.77 ಸೆಕೆಂಡ್'ಗಳಲ್ಲಿ ಗುರಿ ಮುಟ್ಟಿ ಸ್ವರ್ಣ ಪದಕ ಹೆಕ್ಕಿದರೆ, ರಾಜೀವ್ ಆರೋಕಿಯಾ 46.14 ಸೆಕೆಂಡ್'ಗಳಲ್ಲಿ ಓಟ ಮುಗಿಸುವ ಮೂಲಕ ಬೆಳ್ಳಿ ಪದಕ ಗೆದ್ದರು.

1500 ಮೀಟರ್''ನಲ್ಲಿ 'ಡಬಲ್' ಚಿನ್ನ!
ಸತತ 2 ಚಿನ್ನದ ಪದಕ ಗೆದ್ದು ಸಂಭ್ರಮದಲ್ಲಿದ್ದ ಭಾರತಕ್ಕೆ 1500 ಮೀಟರ್ ಓಟದಲ್ಲೂ 2 ಚಿನ್ನದ ಪದಕ ದೊರೆಯಿತು. ಮಹಿಳಾ ವಿಭಾಗದಲ್ಲಿ ಪಿ.ಯು. ಚಿತ್ರಾ 4 ನಿಮಿಷ 17.92 ಸೆಕೆಂಡ್'ಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರೆ, ಪುರುಷರ ವಿಭಾಗದಲ್ಲಿ 3 ನಿಮಿಷ 45.85 ಸೆಕೆಂಡ್'ಗಳಲ್ಲಿ ಓಟ ಮುಗಿಸಿದ ಅಜಯ್ ಕುಮಾರ್ ಸರೋಜ್ ಮೊದಲ ಸ್ಥಾನ ಪಡೆದರು.

ಚಿನ್ನ ಗೆದ್ದ ಅಥ್ಲೀಟ್'ಗಳು ಆಗಸ್ಟ್'ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್'ಗೆ ಅರ್ಹತೆ ಪಡೆದುಕೊಂಡರು.

ಅನಾಸ್'ಗೆ 2 ಬಾರಿ ಸೆಮೀಸ್ ಓಟ!
400 ಮೀಟರ್ ಓಟದಲ್ಲಿ ಚಿನ್ನ ಗಳಿಸಿದ ಅನಾಸ್ ಎರಡೆರಡು ಬಾರಿ ಸೆಮಿಫೈನಲ್ ಎದುರಿಸಿದ್ರು. ಗುರುವಾರ ನಡೆದ ಸೆಮಿಸ್'ನಲ್ಲಿ ಅನಾಸ್ ಮೊದಲಿಗರಾಗಿ ಗುರಿ ಮುಟ್ಟಿದ್ದರು. ಆದರೆ, ಈ ವೇಳೆ ರೆಫರಿ ಕೈಗೊಂಡ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿ ಕೆಲ ಅಥ್ಲೀಟ್'ಗಳು ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೊಮ್ಮೆ ನಡೆದ ಸೆಮೀಸ್'ನಲ್ಲೂ ಅನಾಸ್ ಗೆದ್ದು ಫೈನಲ್ ಪ್ರವೇಶಿಸಿದ್ದರು.

ಕನ್ನಡಿಗರಿಗೆ ನಿರಾಸೆ, ದ್ಯುತಿಗೆ ಕಂಚು:
400 ಮೀಟರ್ ಓಟದಲ್ಲಿ ಎಂಆರ್ ಪೂವಮ್ಮ 4ನೇ ಸ್ಥಾನ ಪಡೆದು ಪದಕ ವಂಚಿತಗೊಂಡ ಬಳಿಕ ಕರ್ನಾಟಕದ ಮತ್ತೊಬ್ಬ ಹಿರಿಯ ಅಥ್ಲೀಟ್ ಸಹನಾ ಕುಮಾರ್ ಹೈಜಂಪ್'ನಲ್ಲಿ 6ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು. ಇದೇ ವೇಳೆ ಮಹಿಳೆಯರ 100 ಮೀಟರ್'ನಲ್ಲಿ ಭಾರತದ ದ್ಯುತಿ ಚಾಂದ್ ಕಂಚಿನ ಪದಕ ಗೆದ್ದರೆ, ಪುರುಷರ ಶಾಟ್'ಪುಟ್'ನಲ್ಲಿ ತಜೀಂದರ್ ಪಾಲ್ ಸಿಂಗ್ ಬೆಳ್ಳಿಗೆ ಮುತ್ತಿಟ್ಟರು.

ಪದಕ ಪಟ್ಟಿ

ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು
ಭಾರತ 6 3 6 15
ಚೀನಾ 4 5 2 11
ಇರಾನ್ 3 0 1 4
ಕಜಕಸ್ತಾನ್ 1 1 1 3
ವಿಯೆಟ್ನಾಂ 1 1 0 2
ಕಿರ್ಗಿಸ್ತಾನ್ 1 0 0 1
ಉಜ್ಬೆಕಿಸ್ತಾನ್ 1 0 0 1
ಥಾಯ್ಲೆಂಡ್ 1 0 0 1