Asianet Suvarna News Asianet Suvarna News

ಮಹಿಳಾ ಏಷ್ಯಾಕಪ್: ಥಾಯ್ಲೆಂಡ್ ವಿರುದ್ಧ ಭಾರತ ಜಯಭೇರಿ

ಮಹಿಳಾ ಏಷ್ಯಾಕಪ್ ಟಿ-ಟ್ವೆಂಟಿ ಟೂರ್ನಿಯಲ್ಲಿ ಭಾರತ ತಂಡ ಸತತ 2ನೇ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಮಲೇಷಿಯಾ ತಂಡವನ್ನ ಮಣಿಸಿದ್ದ ಭಾರತ ಇದೀಗ ಥಾಯ್ಲೆಂಡ್ ವಿರುದ್ದ ಗೆಲುವಿನ ನಗೆ ಬೀರಿದೆ.
 

Asia Cup: Indian women claim second successive win

ಮಲೇಷಿಯಾ(ಜೂನ್.4): ಮಲೇಷಿಯಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟಿ-ಟ್ವೆಂಟಿ ಟೂರ್ನಿಯಲ್ಲಿ ಭಾರತದ ವನಿತೆಯರ ಗೆಲುವಿನ ಓಟ ಮುಂದುವರಿದಿದೆ. ಥಾಯ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಭಾರತ 66 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ 2 ಗೆಲವು ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸಾಧರಣ ಮೊತ್ತ ಪೇರಿಸಿತು. ತಂಡದಲ್ಲಿ ಕೊಂಚ ಬದಲಾವಣೆ ಮಾಡಿ ಕಣಕ್ಕಿಳಿದ ಭಾರತಕ್ಕೆ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಫಲ ಸಿಗಲಿಲ್ಲ. ಮೋನಾ ಮೇಶ್ರಮ್ 32 ರನ್ ಸಿಡಿಸಿ ಔಟಾದರೆ, ಸ್ಮೃತಿ ಮಂದನಾ 29 ರನ್ ಕಾಣಿಕೆ ನೀಡಿದರು. ಕನ್ನಡತಿ ವೇದಾ ಕೃಷ್ಣಮೂರ್ತಿ ಕೇವಲ 11 ರನ್ ಸಿಡಿಸಿ ಔಟಾದರು. ಅನುಜಾ ಪಾಟೀಲ್ 22 ರನ್ ಬಾರಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅಜೇಯ 27 ರನ್ ಬಾರಿಸಿದರು. ಈ ಮೂಲಕ ಭಾರತ ನಿಗಧಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಪೇರಿಸಿತು. 

133 ರನ್ ಗುರಿ ಪಡೆದ ಥಾಯ್ಲೆಂಡ್ ಆರಂಭದಲ್ಲೇ ಸಂಕಷ್ಟ ಅನುಭವಿಸಿತು. ಟೂರ್ನಿಯಲ್ಲಿ ಸತತ 2ನೇ ಬಾರಿ ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ ಭಾರತ, ಎದುರಾಳಿಯನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.  ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲಿ ಮಿಂಚಿದ ನಾಯಕಿ ಹರ್ಮನ್‌ಪ್ರೀತ್ ಕೌರ್ 3 ವಿಕೆಟ್ ಕಬಳಿಸಿದರು. ಇನ್ನು ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ಹಾಗೂ ಪೂನಮ್ ಯಾದವ್ ಮಿಂಚಿನ ಬೌಲಿಂಗ್ ಪ್ರದರ್ಶನದಿಂದ ಥಾಯ್ಲೆಂಡ್ ಕೇವಲ 66 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಪಂದ್ಯದಲ್ಲಿ ಮಲೇಷಿಯಾ ವಿರುದ್ದ ಗೆಲುವು ಸಾಧಿಸಿದ್ದ ಭಾರತ ಇದೀಗ ಥಾಯ್ಲೆಂಡ್ ತಂಡವನ್ನ ಮಣಿಸಿ ಪ್ರಶಸ್ತಿ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ.
 

Follow Us:
Download App:
  • android
  • ios