ಪಾಕಿಸ್ತಾನ ಹಾಗೂ ಬಾಂಗ್ಲಾದೇಶ, ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಸೆಣಸಲಿವೆ. ‘ಎ’ ಗುಂಪಿನಲ್ಲಿದ್ದ ಪಾಕಿಸ್ತಾನ 2ನೇ ತಂಡವಾಗಿ ಸೂಪರ್‌ 4ಗೆ ಅರ್ಹತೆ ಪಡೆದರೆ, ‘ಬಿ’ ಗುಂಪಿನಲ್ಲಿದ್ದ ಬಾಂಗ್ಲಾದೇಶ, 2ನೇ ಸ್ಥಾನ ಪಡೆದು ಮುಂದಿನ ಹಂತ ಪ್ರವೇಶಿಸಿತ್ತು. 

ದುಬೈ[ಸೆ.26]: 2018ರ ಏಷ್ಯಾಕಪ್‌ ಅಂತಿಮ ಹಂತ ಪ್ರವೇಶಿಸಿದ್ದು, ಈಗಾಗಲೇ ಹಾಲಿ ಚಾಂಪಿಯನ್‌ ಭಾರತ ತಂಡ ಫೈನಲ್‌ಗೇರಿದೆ. ರೋಹಿತ್‌ ಶರ್ಮಾ ಪಡೆ ವಿರುದ್ಧ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಡುವ ತಂಡ ಯಾವುದು ಎನ್ನುವುದು ಬುಧವಾರ ನಿರ್ಧಾರವಾಗಲಿದೆ. ಸೂಪರ್‌ 4 ಹಂತದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯ ಸೆಮಿಫೈನಲ್‌ನಂತಾಗಿದೆ.

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ, ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಸೆಣಸಲಿವೆ. ‘ಎ’ ಗುಂಪಿನಲ್ಲಿದ್ದ ಪಾಕಿಸ್ತಾನ 2ನೇ ತಂಡವಾಗಿ ಸೂಪರ್‌ 4ಗೆ ಅರ್ಹತೆ ಪಡೆದರೆ, ‘ಬಿ’ ಗುಂಪಿನಲ್ಲಿದ್ದ ಬಾಂಗ್ಲಾದೇಶ, 2ನೇ ಸ್ಥಾನ ಪಡೆದು ಮುಂದಿನ ಹಂತ ಪ್ರವೇಶಿಸಿತ್ತು. ಸೂಪರ್‌ 4 ಹಂತದಲ್ಲಿ ಉಭಯ ತಂಡಗಳ ಪ್ರದರ್ಶನ ಹೆಚ್ಚೂ ಕಡಿಮೆ ಒಂದೇ ರೀತಿ ಇದೆ. ಭಾರತ ವಿರುದ್ಧ ಹೀನಾಯವಾಗಿ ಸೋತಿದ್ದ ಬಾಂಗ್ಲಾದೇಶ, ಭಾನುವಾರ ಆಷ್ಘಾನಿಸ್ತಾನ ವಿರುದ್ಧ ತಿಣುಕಾಡಿ ಅಂತಿಮ ಓವರ್‌ನಲ್ಲಿ ಗೆಲುವು ಸಾಧಿಸಿತ್ತು. ಮತ್ತೊಂದೆಡೆ ಆಷ್ಘಾನಿಸ್ತಾನ ವಿರುದ್ಧ ಪರದಾಡಿ, ಅಂತಿಮ ಓವರ್‌ನಲ್ಲಿ ಗೆಲುವು ಪಡೆದಿದ್ದ ಪಾಕಿಸ್ತಾನ ತನ್ನ 2ನೇ ಪಂದ್ಯದಲ್ಲಿ ಭಾರತಕ್ಕೆ ಸುಲಭವಾಗಿ ಶರಣಾಯಿತು. ಈ ಪಂದ್ಯ ಸಮಬಲರ ನಡುವಿನ ಹೋರಾಟ ಎಂದು ಬಿಂಬಿತವಾಗಿದೆ.

ಬೌಲರ್‌ಗಳೇ ಆಧಾರ: ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಪ್ರತಿಭಾನ್ವಿತ ಬೌಲರ್‌ಗಳನ್ನು ಹೊಂದಿದೆ. ಪಾಕ್‌ ತಂಡದಲ್ಲಿ ಮೊಹಮದ್‌ ಆಮೀರ್‌, ಶಾಹೀನ್‌ ಅಫ್ರಿದಿ, ಹಸನ್‌ ಅಲಿಯಂತಹ ವೇಗಿಗಳಿದ್ದರೆ, ಬಾಂಗ್ಲಾಕ್ಕೆ ಮುಸ್ತಾಫಿಜುರ್‌ ರಹಮಾನ್‌, ರುಬೆಲ್‌ ಹೊಸೈನ್‌, ಮಶ್ರಫೆ ಮೊರ್ತಜಾ ಬಲಿವಿದೆ. ಶದಾಬ್‌ ಖಾನ್‌ ಪಾಕಿಸ್ತಾನದ ಸ್ಪಿನ್‌ ಅಸ್ತ್ರವಾದರೆ, ಬಾಂಗ್ಲಾದೇಶ ಶಕೀಬ್‌-ಅಲ್‌-ಹಸನ್‌ ಹಾಗೂ ಮೆಹದಿ ಹಸನ್‌ ಮೇಲೆ ವಿಶ್ವಾಸವಿರಿಸಿದೆ. ಈ ಪಂದ್ಯ ಬೌಲರ್‌ಗಳ ನಡುವಿನ ಪೈಪೋಟಿಯಿಂದಾಗಿ ಭಾರೀ ಕುತೂಹಲ ಮೂಡಿಸಿದೆ.

ಅನುಭವಿಗಳ ಮೇಲೆ ನಿರೀಕ್ಷೆ: ಬಾಂಗ್ಲಾದೇಶ ಹಾಗೂ ಪಾಕಿಸ್ತಾನ, ತನ್ನ ಅನುಭವಿ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚು ನಿರೀಕ್ಷೆ ಇರಿಸಿದೆ. ಎರಡೂ ತಂಡಕ್ಕೆ ಆರಂಭಿಕರಿಂದ ನಿರೀಕ್ಷಿತ ಕೊಡುಗೆ ದೊರೆಯುತ್ತಿಲ್ಲ. ಹೀಗಾಗಿ ಮಧ್ಯಮ ಕ್ರಮಾಂಕದ ಪ್ರದರ್ಶನ ನಿರ್ಣಾಯಕವೆನಿಸಲಿದೆ. ಪಾಕಿಸ್ತಾನ ತನ್ನ ಹಿರಿಯ ಆಟಗಾರ ಶೋಯಿಬ್‌ ಮಲಿಕ್‌ ಹಾಗೂ ನಾಯಕ ಸರ್ಫರಾಜ್‌ ಅಹ್ಮದ್‌ ಮೇಲೆ ಅವಲಂಬಿತಗೊಂಡರೆ, ಬಾಂಗ್ಲಾದೇಶಕ್ಕೆ ಮಹಮದುಲ್ಲಾ ಹಾಗೂ ಮುಷ್ಫಿಕರ್‌ ರಹೀಮ್‌ ಆಟ ಕೈಹಿಡಿಯಬೇಕಿದೆ. 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿರುವ ಶಕೀಬ್‌ ಅಲ್‌ ಹಸನ್‌, ಪರಿಣಾಮಕಾರಿಯಾಗುತ್ತಿಲ್ಲ. ಇದು ತಂಡದ ಆತಂಕ ಹೆಚ್ಚಿಸಿದೆ. ಎರಡೂ ತಂಡಕ್ಕೆ ಕ್ಷೇತ್ರರಕ್ಷಣೆಯೇ ದೊಡ್ಡ ದೌರ್ಬಲ್ಯ. ಬಾಂಗ್ಲಾ ಹಾಗೂ ಪಾಕ್‌ ಟೂರ್ನಿಯುದ್ದಕ್ಕೂ ಕ್ಯಾಚ್‌ಗಳನ್ನು ಕೈಚೆಲ್ಲುತ್ತಾ ಬಂದಿವೆ. ಇದರ ಜತೆಗೆ ಪಿಚ್‌ ಸ್ಥಿತಿ ಅರಿಯುವುದರಲ್ಲೂ ಉಭಯ ನಾಯಕರು ಎಡವುತ್ತಿದ್ದಾರೆ. ತಂಡದ ಸಂಯೋಜನೆ, ಟಾಸ್‌ ಗೆದ್ದರೆ ಮೊದಲು ಬ್ಯಾಟ್‌ ಇಲ್ಲವೇ ಫೀಲ್ಡ್‌ ಮಾಡಬೇಕೋ ಎನ್ನುವ ಗೊಂದಲದಿಂದ ಹೊರಬರಲು ಉಭಯ ತಂಡಗಳ ನಾಯಕರಿಗೆ ಸಾಧ್ಯವಾಗುತ್ತಿಲ್ಲ.

ಈ ಪಂದ್ಯದಲ್ಲಿ ಹೋರಾಡಿ ಗೆದ್ದರೂ, ಶುಕ್ರವಾರ(ಸೆ.28)ದ ಫೈನಲ್‌ನಲ್ಲಿ ಮತ್ತೊಮ್ಮೆ ಭಾರತವನ್ನು ಎದುರಿಸಬೇಕು ಎನ್ನುವ ಭೀತಿ ಎರಡೂ ತಂಡಗಳಿಗೆ ಸಹಜವಾಗಿಯೇ ಇರಲಿದೆ. ಆದರೂ ಕ್ರಿಕೆಟ್‌ನಲ್ಲಿ ಏನು ಬೇಕಿದ್ದರೂ ಸಾಧ್ಯ ಎನ್ನುವುದನ್ನು ಮರೆಯುವ ಹಾಗಿಲ್ಲ.