ಢಾಕ(ಸೆ.07): ಏಷ್ಯಾಕಪ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. ಸೆಪ್ಟೆಂಬರ್ 15 ರಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಪ್ರತಿಷ್ಠಿತ ಟೂರ್ನಿ ಗೆಲುವಿಗೆ ತಂಡಗಳು ಕಸರತ್ತು ಆರಂಭಿಸಿದೆ. ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುತ್ತಿದ್ದಂತೆ ಬಹುತೇಕ ಎಲ್ಲಾ ತಂಡಗಳು ಭಾರತವನ್ನ ಮಣಿಸೋ ವಿಶ್ವಾಸದಲ್ಲಿದೆ.

ವಿರಾಟ್ ಕೊಹ್ಲಿ ಅನುಪಸ್ಥಿತಿಯಿಂದ ಪಾಕಿಸ್ತಾನ ಏಷ್ಯಾಕಪ್ ಟೂರ್ನಿ ಗೆಲ್ಲೋ ನೆಚ್ಚಿನ ತಂಡ ಎಂದು ಪಾಕಿಸ್ತಾನ ವೇಗಿ ಹಸನ್ ಆಲಿ ಹೇಳಿದ್ದರು. ಇದೀಗ ಪಾಕ್ ಬಳಿಕ ಬಾಂಗ್ಲಾದೇಶ ಕೂಡ ಭಾರತವನ್ನ ಸೋಲಿಸೋ ವಿಶ್ವಾಸದಲ್ಲಿದೆ.

ಭಾರತ ಹಾಗೂ ಪಾಕಿಸ್ತಾನ ಎರಡು ಬಲಿಷ್ಠ ತಂಡ. ಆದರೆ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಈ ಎರಡೂ ತಂಡವನ್ನ ಸೋಲಿಸಲಿದೆ ಎಂದು ಬಾಂಗ್ಲಾದೇಶ ನಾಯಕ ಮಶ್ರಫೆ ಮೊರ್ತಝಾ ಹೇಳಿದ್ದಾರೆ. 

ಏಷ್ಯಾಕಪ್ ಟೂರ್ನಿಯಿಂದ ಕೊಹ್ಲಿಗೆ ವಿಶ್ರಾಂತಿ ನೀಡುತ್ತಿದ್ದಂತೆ, ಏಷ್ಯಾ ತಂಡಗಳು ಟೀಂ ಇಂಡಿಯಾ ಮಣಿಸಲು ತಯಾರಾಗಿದೆ. ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಸದ್ಯ ದ್ವಿತೀಯ ಸ್ಥಾನದಲ್ಲಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ತಂಡಗಳ ಪೈಕಿ ಭಾರತವೇ ಬಲಿಷ್ಠ ತಂಡ. 

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲೂ ಟೀಂ ಇಂಡಿಯಾ ಬಲಿಷ್ಠವಾಗಿದೆ. ರೋಹಿತ್ ಶರ್ಮಾ ನಾಯಕತ್ವ, ಎಂ ಎಸ್ ಧೋನಿ ಅನುಭವ ಹಾಗೂ ಯುವ ಪ್ರತಿಭೆಗಳ ಟೀಂ ಇಂಡಿಯಾ ಈ ಬಾರಿಯ ಏಷ್ಯಾಕಪ್ ಗೆಲ್ಲುವ ನೆಚ್ಚಿನ ತಂಡ. ಆದರೆ ಸರಣಿ ಆರಂಭಕ್ಕೂ ಮುನ್ನ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡದ ವಿಶ್ವಾಸ ಮಾತ್ರ ಇಮ್ಮಡಿಯಾಗಿದೆ.