ವುಹಾನ್‌ (ಚೀನಾ): ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌, ಪಿ.ವಿ. ಸಿಂಧು ಹಾಗೂ ಸಮೀರ್‌ ವರ್ಮಾ ಇಲ್ಲಿ ನಡೆಯುತ್ತಿರುವ ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ. ಇದರೊಂದಿಗೆ ಭಾರತದ ಸವಾಲು ಅಂತ್ಯವಾಗಿದೆ.

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಸೈನಾ, ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ 13-21, 23-21, 16-21 ಗೇಮ್‌ಗಳಲ್ಲಿ ಸೋಲು ಕಂಡರು. 1 ಗಂಟೆ 9 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಯಮಗುಚಿ ಪ್ರಾಬಲ್ಯ ಮೊದಲ ಗೇಮ್‌ನಲ್ಲಿ ಪ್ರಾಬಲ್ಯ ಮೆರೆದರು. 2ನೇ ಗೇಮ್‌ನಲ್ಲಿ ಪ್ರಯಾಸದ ಗೆಲುವು ಪಡೆದ ಸೈನಾ, 3ನೇ ಗೇಮ್‌ನಲ್ಲಿ 14-11ರಿಂದ ಮುಂದಿದ್ದರೂ, ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಳೆದ 9 ಪಂದ್ಯಗಳಲ್ಲಿ ಜಪಾನ್‌ ಆಟಗಾರ್ತಿ ವಿರುದ್ಧ ಸೈನಾಗಿದು 8ನೇ ಸೋಲಾಗಿದೆ.

ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವ ನಂ.6 ಪಿ.ವಿ. ಸಿಂಧು, 19-21, 9-21 ನೇರ ಗೇಮ್‌ಗಳಲ್ಲಿ ಶ್ರೇಯಾಂಕ ರಹಿತ ಚೀನಾ ಆಟಗಾರ್ತಿ ಕೇ ಯಾನ್‌ಯಾನ್‌ ವಿರುದ್ಧ ಸೋಲುಂಡು ಆಘಾತ ಅನುಭವಿಸಿದರು. ಕೇವಲ 31 ನಿಮಿಷಗಳಲ್ಲಿ ಚೀನಾ ಶಟ್ಲರ್‌ಗೆ ಒಲಿಂಪಿಕ್‌ ಬೆಳ್ಳಿ ವಿಜೇತೆ ಸಿಂಧು ಶರಣಾದರು. ಯಾನ್‌ಯಾನ್‌ ಎದುರು ಸಿಂಧುಗೆ ಇದು ಮೊದಲ ಸೋಲು.

ಪುರುಷರ ಸಿಂಗಲ್ಸ್‌ ಎಂಟರಘಟ್ಟದಲ್ಲಿ ಸಮೀರ್‌ ವರ್ಮಾ 2ನೇ ಶ್ರೇಯಾಂಕಿತ, ಚೀನಾದ ಶೀ ಯೂಕಿ ಎದುರು 10-21, 12-21 ಗೇಮ್‌ಗಳಲ್ಲಿ ಸೋಲು ಅನುಭವಿಸಿದರು. ಯೂಕಿ ವಿರುದ್ಧ 6 ಪಂದ್ಯಗಳಲ್ಲಿ ಸಮೀರ್‌ 5ರಲ್ಲಿ ಸೋತಂತಾಗಿದೆ.