ಬ್ಯಾಟಿಂಗ್ ಹಾಗೂ ಬೌಲಿಂಗ್ ಈ ಎರಡರಲ್ಲಿಯೂ ಸೊಗಸಾದ ಆಟದೊಂದಿಗೆ ತವರಿನಲ್ಲಿನ ಭಾರತದ ಜಯದ ನಾಗಾಲೋಟಕ್ಕೆ ಪ್ರಮುಖ ಕಾರಣಕರ್ತನಾಗಿರುವ ಆರ್. ಅಶ್ವಿನ್, ಇಂಗ್ಲೆಂಡ್ ವಿರುದ್ಧದ ಮತ್ತೊಂದು ಗೆಲುವಿಗೆ ಮೆಟ್ಟಿಲಾಗಿದ್ದಾರೆ.

ಮೊಹಾಲಿ(ನ.28): ಭಾರತದ ಸ್ಪಿನ್ ಮಾಂತ್ರಿಕರ ಮಾಯಾಜಾಲ ಮುಂದುವರೆದಿದ್ದು ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಸಂಪೂರ್ಣ ಪ್ರಭುತ್ವ ಸಾಧಿಸಿದೆ. ಈ ಮೂಲಕ ಕೊಹ್ಲಿ ಪಡೆ ಆಂಗ್ಲರ ಎದುರು 2-0 ಮುನ್ನಡೆ ಪಡೆಯುವುದನ್ನು ಇನ್ನಷ್ಟು ಖಾತ್ರಿಪಡಿಸಿದೆ.

ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಅಲಸ್ಟೇರ್ ಕುಕ್ ನೇತೃತ್ವದ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 38 ಓವರ್‌ಗಳಲ್ಲಿ 4 ವಿಕೆಟ್‌ಗೆ 78 ರನ್ ಗಳಿಸಿದ್ದು, ಇನ್ನೂ 56 ರನ್ ಹಿನ್ನಡೆಯಲ್ಲಿದೆ. ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳುವುದೇ ಬಹುದೊಡ್ಡ ಸವಾಲಾಗಿ ಪರಿಣಮಿಸಿರುವ ಇಂಗ್ಲೆಂಡ್, ಒಂದೊಮ್ಮೆ ಇದರಿಂದ ಪಾರಾದರೂ, ಸೋಲಿನಿಂದ ಬಚಾವಾಗುವುದಂತೂ ಕಷ್ಟಸಾಧ್ಯವಾಗಿದೆ. ಆಟ ನಿಂತಾಗ ಜೋ ರೂಟ್ (36) ಜತೆಗೆ ಐದು ಎಸೆತಗಳಲ್ಲಿ ಇನ್ನಷ್ಟೇ ರನ್ ಖಾತೆ ತೆರೆಯಬೇಕಿರುವ ಗರೆತ್ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಗೆಲುವಿಗೆ ಮೆಟ್ಟಿಲಾದ ಅಶ್ವಿನ್

ಬ್ಯಾಟಿಂಗ್ ಹಾಗೂ ಬೌಲಿಂಗ್ ಈ ಎರಡರಲ್ಲಿಯೂ ಸೊಗಸಾದ ಆಟದೊಂದಿಗೆ ತವರಿನಲ್ಲಿನ ಭಾರತದ ಜಯದ ನಾಗಾಲೋಟಕ್ಕೆ ಪ್ರಮುಖ ಕಾರಣಕರ್ತನಾಗಿರುವ ಆರ್. ಅಶ್ವಿನ್, ಇಂಗ್ಲೆಂಡ್ ವಿರುದ್ಧದ ಮತ್ತೊಂದು ಗೆಲುವಿಗೆ ಮೆಟ್ಟಿಲಾಗಿದ್ದಾರೆ. 134 ರನ್‌'ಗಳ ಹಿನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌ನ ಪತನಕ್ಕೆ ಅಶ್ವಿನ್ ನಾಂದಿ ಹಾಡಿದರು. ಮೊದಲಿಗೆ ನಾಯಕ ಅಲಸ್ಟೇರ್ ಕುಕ್ (12) ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಅವರು ಆಂಗ್ಲರ ಪಾಳೆಯದಲ್ಲಿ ನಡುಕ ಎಬ್ಬಿಸಿದರು. ಬಳಿಕ ಬಂದ ಮೊಯೀನ್ ಅಲಿ (5) ಇದೇ ಅಶ್ವಿನ್ ಬೌಲಿಂಗ್‌'ನಲ್ಲಿ ಜಯಂತ್ ಯಾದವ್‌'ಗೆ ಕ್ಯಾಚಿತ್ತು ಕ್ರೀಸ್ ತೊರೆದರೆ, ಆನಂತರದಲ್ಲಿ ವಿಕೆಟ್‌ಕೀಪರ್ ಜಾನಿ ಬೇರ್‌ಸ್ಟೋ (15) ಜಯಂತ್ ಯಾದವ್ ಬೌಲಿಂಗ್‌ನಲ್ಲಿ ಪಾರ್ಥೀವ್ ಪಟೇಲ್‌ಗೆ ಕ್ಯಾಚಿತ್ತು ಪೆವಿಲಿಯನ್‌ನತ್ತ ನಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ ದಿಟ್ಟತನದ ಅರ್ಧಶತಕದೊಂದಿಗೆ ತಂಡವನ್ನು ಆದರಿಸಿದ್ದ ಜಾನಿಯ ಪತನ ಇಂಗ್ಲೆಂಡ್ ಅನ್ನು ಹೈರಾಣಾಗಿಸಿದರೆ, ದಿನದಾಟದ ಕಡೆಯಲ್ಲಿ ಆಲ್ರೌಂಡರ್ ಬೆನ್ ಸ್ಟೋಕ್ಸ್ (5) ಅಶ್ವಿನ್ ಬೌಲಿಂಗ್‌ನಲ್ಲಿ ಎಲ್‌'ಬಿ ಬಲೆಗೆ ಬಿದ್ದದ್ದು ಭಾರತದ ಪಾಳಯದಲ್ಲಿ ಸಂಭ್ರಮದ ಕೇಕೆ ಹಾಕಲು ಕಾರಣವಾಯಿತು.

ಜಯಂತ್ ಚೊಚ್ಚಲ ಅರ್ಧಶತಕ

ಪಂದ್ಯದ ಎರಡನೇ ದಿನದಾಟದ ಕೊನೆಗೆ 6 ವಿಕೆಟ್‌ಗೆ 271 ರನ್‌'ಗಳಿಸಿದ್ದ ಭಾರತದ ಪರ ಹೋರಾಟ ಮುಂದುವರೆಸಿದ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಇಂಗ್ಲೆಂಡ್ ಬೌಲರ್‌ಗಳನ್ನು ಮತ್ತೂ ಕಾಡಿದರು. ಕ್ರಮವಾಗಿ 57 ಮತ್ತು 31 ರನ್ ಗಳಿಸಿದ್ದ ಈ ಇಬ್ಬರೂ, ಭಾರತದ ಇನ್ನಿಂಗ್ಸ್‌ಗೆ ಇನ್ನಷ್ಟು ಶಕ್ತಿತುಂಬಿದರು. ಅಂತಿಮವಾಗಿ ಈ ಜೋಡಿಯನ್ನು ಸ್ಟೋಕ್ಸ್ ಬೇರೆ ಮಾಡಿದರು. ಭೋಜನ ವಿರಾಮಕ್ಕೆ ಮುಂಚೆ ಅಶ್ವಿನ್ ಬಟ್ಲರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. 113 ಎಸೆತಗಳನ್ನು ಎದರುಸಿದ ಅಶ್ವಿನ್ 11 ಬೌಂಡರಿಗಳುಳ್ಳ 72 ರನ್ ಗಳಿಸಿದರು. ಏಳನೇ ವಿಕೆಟ್‌'ಗೆ ಅಶ್ವಿನ್ ಮತ್ತು ಜಡೇಜಾ ಜೋಡಿ 97 ರನ್ ಜತೆಯಾಟವಾಡಿತು. ಇನ್ನು ಅಶ್ವಿನ್ ನಿರ್ಗಮನದ ನಂತರ ಆಡಲಿಳಿದ ಜಯಂತ್ ಯಾದವ್ ಅವರನ್ನು ಕೂಡಿಕೊಂಡ ಜಡೇಜಾ ಆಂಗ್ಲ ಬೌಲರ್‌ಗಳಿಗೆ ಇನ್ನಷ್ಟು ಸವಾಲಾದರು. ಚಾಣಾಕ್ಷತೆಯಿಂದ ಬ್ಯಾಟಿಂಗ್ ನಡೆಸಿದ ಜಯಂತ್ ಯಾದವ್(55), ಜಡೇಜಾ(90)ಗೆ ಅದ್ಭುತ ಸಾಥ್ ನೀಡಿದರು. ಆಲ್ರೌಂಡರ್ ಜಡೇಜಾ ಶತಕವಂಚಿತರಾದರೂ ಕೆಳಕ್ರಮಾಂಕದಲ್ಲಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.

ಸ್ಕೋರ್ ವಿವರ

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 283

ಭಾರತ ಮೊದಲ ಇನ್ನಿಂಗ್ಸ್: 417

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್

38 ಓವರ್‌ಗಳಲ್ಲಿ 4 ವಿಕೆಟ್‌ಗೆ 78