ರಷ್ಯಾ(ಜೂ.30): ಫ್ರಾನ್ಸ್ ವಿರುದ್ಧ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಅರ್ಜೆಂಟೀನಾ 3-4 ಅಂತರದಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಅರ್ಜೆಂಟೀನಾ ಸೋಲಿನೊಂದಿಗೆ ವಿಶ್ವಕಪ್ ಟೂರ್ನಿಗೆ ವಿದಾಯ ಹೇಳಿದೆ. ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಲಿಯೋನಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಸೋಲಿಗೆ ಶರಣಾಗಿದೆ. ಮಹತ್ವದ ಪಂದ್ಯದಲ್ಲೂ ಮೆಸ್ಸಿ ಗೋಲು ಬಾರಿಸದೇ ಇರೋದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ಪಂದ್ಯದ ಆರಂಭದಲ್ಲೇ ಫ್ರಾನ್ಸ್ ಮೇಲುಗೈ ಸಾಧಿಸಿತು. 13ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಉಪಯೋಗಿಸಿಕೊಂಡ ಅಂಟೋನಿ ಗ್ರೈಜ್‌ಮೆನ್ ಗೋಲು ಬಾರಿಸಿ ಫ್ರಾನ್ಸ್‌ಗೆ 1-0 ಮುನ್ನಡೆ ತಂದುಕೊಟ್ಟರು. 41 ನೇ ನಿಮಿಷದಲ್ಲಿ ಅರ್ಜೆಂಟಿನಾ ತಿರೇಗೇಟು ನೀಡಿತು. ಆಂಜೆಲ್ ಡಿ ಮರಿಯಾ ಗೋಲಿನಿಂದ ಅರ್ಜೆಂಟಿನಾ ಸಮಭಲಗೊಳಿಸಿತು.

48ನೇ ನಿಮಿಷದಲ್ಲಿ ಅರ್ಜೆಂಟಿನಾದ ಗೆಬ್ರಿಯಲ್ ಮೆರ್ಕಾಡೋ ಬಾರಿಸಿದ ಗೋಲಿನಿಂಜ 2-1 ಮುನ್ನಡೆ ಸಾಧಿಸಿತು. ಆದರೆ ಅರ್ಜೆಂಟಿನಾ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. 57ನೇ ನಿಮಿಷದಲ್ಲಿ ಫ್ರಾನ್ಸ್ ತಂಡದ ಬೆಂಜಮಿನ್ ಪವರ್ಡ್ ಸಿಡಿಸಿದ ಗೋಲಿನಿಂದ ಫ್ರಾನ್ಸ್ ಮತ್ತೆ ಕಮ್‌ಬ್ಯಾಕ್ ಮಾಡಿತು.

ಕಲಿಯಾನ್ ಎಮ್‌ಬಾಪೆ 64 ಹಾಗೂ 68ನೇ ನಿಮಿಷದಲ್ಲಿ ಭರ್ಜರಿ 2 ಗೋಲು ಸಿಡಿಸಿ ಫ್ರಾನ್ಸ್ ತಂಡಕ್ಕೆ 4-2 ಮುನ್ನಡೆ ತಂದುಕೊಟ್ಟರು. ಗೆಲುವಿಗಾಗಿ ಅರ್ಜೆಂಟೀನಾ ಕೊನೆಯವರೆಗೂ ಹೋರಾಡಿತು. 90+3 ನೇ ನಿಮಿಷದಲ್ಲಿ ಸರ್ಜಿಯೋ ಅಗೆರೋ ಗೋಲು ಬಾರಿಸೋ ಮೂಲಕ ಅರ್ಜೆಂಟಿನಾ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಅರ್ಜೆಂಟಿನಾ ಸೋಲಿನ ಅಂತರವನ್ನ 3-4ಕ್ಕೆ ಇಳಿಸಿತೇ ಹೊರತು ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ನಾಕೌಟ್ ಪಂದ್ಯದ ಸೋಲಿನೊಂದಿಗೆ ಅರ್ಜೆಂಟೀನಾ ಫಿಫಾ ವಿಶ್ವಕಪ್ ಟೂರ್ನಿಗೆ ವಿದಾಯ ಹೇಳಿತು. ರೋಚಕ ಗೆಲುವು ದಾಖಲಿಸಿದ ಫ್ರಾನ್ಸ್ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶ ಪಡೆಯಿತು.