ತಪ್ಪಿನ ಅರಿವಾದ ಕೂಡಲೇ ಕುಂಬ್ಳೆ ಹಳೆ ಟ್ವೀಟನ್ನು ತೆಗೆದು ಹಾಕಿ, ಹೊಸದಾಗಿ ಶುಭಾಶಯ ಸಂದೇಶ ಬರೆದಿದ್ದಾರೆ.

ನವದೆಹಲಿ(ಏ.26): ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ನಾಯಕ, ಭಾರತದ ಮಾಜಿ ಕ್ರಿಕೆಟಿಗ ಜಹೀರ್‌ ಖಾನ್‌ ಹಾಗೂ ಬಾಲಿವುಡ್‌ ನಟಿ ಸಾಗರಿಕಾ ಘಾಟ್ಗೆ ಮದುವೆ ನಿಶ್ಚಿತಾರ್ಥದ ಸುದ್ದಿ ಸಾಮಾಜಿಕ ತಾಣಗಳಲ್ಲಿ ಟ್ರೆಂಡ್‌ ಆಗುತ್ತಿದೆ. ಹಲವಾರು ಕ್ರಿಕೆಟಿಗರು, ಸಿನಿಮಾ ತಾರೆಯರು ಈ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತ ತಂಡದ ಪ್ರಧಾನ ಕೋಚ್‌ ಅನಿಲ್‌ ಕುಂಬ್ಳೆ ಟ್ವಿಟರ್‌ನಲ್ಲಿ ಜಹೀರ್‌ ಜೋಡಿಗೆ ಶುಭಹಾರೈಕೆಗಳನ್ನು ಕೋರುವಾಗ ಎಡವಟ್ಟೊಂದು ಮಾಡಿ ಮುಜುಗರಕ್ಕೆ ಒಳಗಾದ ಪ್ರಸಂಗ ನಡೆದಿದೆ. ಸಾಗರಿಕಾ ಘಾಟ್ಗೆ ಬದಲಿಗೆ, ಕುಂಬ್ಳೆ ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್‌ ಅವರನ್ನು ಟ್ಯಾಗ್‌ ಮಾಡಿದ್ದರು. ತಪ್ಪಿನ ಅರಿವಾದ ಕೂಡಲೇ ಕುಂಬ್ಳೆ ಹಳೆ ಟ್ವೀಟನ್ನು ತೆಗೆದು ಹಾಕಿ, ಹೊಸದಾಗಿ ಶುಭಾಶಯ ಸಂದೇಶ ಬರೆದಿದ್ದಾರೆ. ಕುಂಬ್ಳೆ ಮಾತ್ರವಲ್ಲ, ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಅಧಿಕೃತ ಟ್ವಿಟರ್‌ ಪುಟದಲ್ಲೂ ಇದೇ ರೀತಿಯ ತಪ್ಪಾಗಿತ್ತು.