ಕೋಚ್‌ ಹುದ್ದೆಯಿಂದ ಕೆಳಗಿಳಿಯಲು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಯೇ ಕಾರಣ ಎಂದು ಅವರ ಹೆಸರನ್ನು ಉಲ್ಲೇಖಿಸದೆ ಅನಿಲ್‌ ಕುಂಬ್ಳೆ ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿ ಮುಂದೆ ನಾಯಕ ನೀಡಿದ ಹೇಳಿಕೆಗಳು ಅಚ್ಚರಿ ಮೂಡಿಸಿದ್ದು, ತಮ್ಮೊಂದಿಗೆ ನಾಯಕನಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದಿದ್ದ ಮೇಲೆ ಹುದ್ದೆಯಲ್ಲಿ ಮುಂದುವರಿಯುವಲ್ಲಿ ಅರ್ಥವಿಲ್ಲ ಎಂದು ಕುಂಬ್ಳೆ ಹೇಳಿಕೊಂಡಿದ್ದಾರೆ. ಬಿಸಿಸಿಐಗೆ ಬರೆದ ಪತ್ರವನ್ನು ಅವರು ಮಂಗಳವಾರ ರಾತ್ರಿ ಟ್ವಿಟರ್‌ನಲ್ಲಿ ಪ್ರಕಟಿಸಿದ್ದು ಅದರ ಪೂರ್ಣಪಾಠ ಇಂತಿದೆ. 

ಮುಂಬೈ(ಜೂ.21): ಕೋಚ್‌ ಹುದ್ದೆಯಿಂದ ಕೆಳಗಿಳಿಯಲು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಯೇ ಕಾರಣ ಎಂದು ಅವರ ಹೆಸರನ್ನು ಉಲ್ಲೇಖಿಸದೆ ಅನಿಲ್‌ ಕುಂಬ್ಳೆ ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿ ಮುಂದೆ ನಾಯಕ ನೀಡಿದ ಹೇಳಿಕೆಗಳು ಅಚ್ಚರಿ ಮೂಡಿಸಿದ್ದು, ತಮ್ಮೊಂದಿಗೆ ನಾಯಕನಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದಿದ್ದ ಮೇಲೆ ಹುದ್ದೆಯಲ್ಲಿ ಮುಂದುವರಿಯುವಲ್ಲಿ ಅರ್ಥವಿಲ್ಲ ಎಂದು ಕುಂಬ್ಳೆ ಹೇಳಿಕೊಂಡಿದ್ದಾರೆ. ಬಿಸಿಸಿಐಗೆ ಬರೆದ ಪತ್ರವನ್ನು ಅವರು ಮಂಗಳವಾರ ರಾತ್ರಿ ಟ್ವಿಟರ್‌ನಲ್ಲಿ ಪ್ರಕಟಿಸಿದ್ದು ಅದರ ಪೂರ್ಣಪಾಠ ಇಂತಿದೆ. 

‘ನನ್ನ ಮೇಲೆ ನಂಬಿಕೆಯಿಟ್ಟು ನನ್ನನ್ನು ಕೋಚ್‌ ಆಗಿ ಮುಂದು­ವರಿ­ಯುವಂತೆ ಕೇಳಿಕೊಂಡ ಕ್ರಿಕೆಟ್‌ ಸಲಹಾ ಸಮಿತಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಕಳೆದೊಂದು ವರ್ಷದಲ್ಲಿ ತಂಡ ಸಾಧಿಸಿದ ಯಶಸ್ಸಿನ ಶ್ರೇಯ ನಾಯಕ, ಪ್ರತಿಯೊಬ್ಬ ಆಟಗಾರ, ಕೋಚಿಂಗ್‌ ಹಾಗೂ ಸಹಾಯಕ ಸಿಬ್ಬಂದಿಗೆ ಸಲ್ಲುತ್ತದೆ.

ನಾಯಕನಿಗೆ ನನ್ನ ‘ಶೈಲಿ' ಹಾಗೂ ನಾನು ಕೋಚ್‌ ಆಗಿ ಮುಂದುವರಿಯುವುದು ಇಷ್ಟವಿಲ್ಲ ಎಂದು ನನಗೆ ನಿನ್ನೆಯಷ್ಟೇ ಬಿಸಿಸಿಐನಿಂದ ಮೊದಲ ಬಾರಿಗೆ ತಿಳಿಯಿತು. ಕೋಚ್‌ ಆಗಿ ನಾಯಕನಿಗೆ ನೀಡಬೇಕಿದ್ದ ಸ್ವಾತಂತ್ರ್ಯವನ್ನು ನೀಡುತ್ತಾ ಬಂದಿದ್ದ ನನಗೆ ಇದರಿಂದ ಆಶ್ಚರ್ಯವಾಯಿತು. ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಬಿಸಿಸಿಐ ಹಾಗೂ ಸಲಹಾ ಸಮಿತಿ ಪ್ರಯತ್ನ ನಡೆಸಿತಾದರೂ, ಏನೂ ಪ್ರಯೋಜನವಾಗದ ಕಾರಣ ನಾನು ಹುದ್ದೆಯಿಂದ ಕೆಳಗಿಳಿದು ಮುನ್ನಡೆಯಲು ನಿರ್ಧರಿಸಿದ್ದೇನೆ.

ವೃತ್ತಿಪರತೆ, ಶಿಸ್ತು, ಬದ್ಧತೆ, ಪ್ರಾಮಾಣಿಕತೆ, ಪೂರಕ ಕೌಶಲ್ಯಗಳು, ವೈವಿಧ್ಯಮಯ ಆಲೋಚನೆಗಳನ್ನು ನಾನು ಅಳವಡಿಸಿಕೊಂಡಿದ್ದೇನೆ. ಕೋಚ್‌ ಹಾಗೂ ತಂಡದ ನಡುವೆ ಸಂಬಂಧ ಗಟ್ಟಿಯಾಗಿ ಉಳಿಯಲು ಗುಣಲಕ್ಷಣಗಳನ್ನು ಗೌರವಿಸಬೇಕಾಗುತ್ತದೆ. ಸದಾ ತಂಡದ ಒಳಿತಿಗಾಗಿ ಯೋಚಿಸಬೇಕಾಗುತ್ತದೆ. ಈ ರೀತಿ ಅಸಮಾಧಾನಗಳಿದ್ದಾಗ ನಾನು ಕೋಚ್‌ ಸ್ಥಾನವನ್ನು ಸಲಹಾ ಸಮಿತಿ ಹಾಗೂ ಬಿಸಿಸಿಐ ಆಯ್ಕೆ ಮಾಡುವ ಹೊಸಬರಿಗೆ ಬಿಟ್ಟು ಮುನ್ನಡೆಯುವುದು ಒಳಿತು ಎನ್ನುವುದು ನನ್ನ ನಂಬಿಕೆ.

ನಾನು ಮತ್ತೊಮ್ಮೆ ಹೇಳಲಿಚ್ಛಿಸುತ್ತೇನೆ, ಭಾರತ ತಂಡದ ಪ್ರಧಾನ ಕೋಚ್‌ ಆಗಿ ಸೇವೆ ಸಲ್ಲಿಸಿದ್ದು ನನಗೆ ಬಹಳ ಸಂತೋಷ ಹಾಗೂ ಹೆಮ್ಮೆ ತಂದಿದೆ. ನನಗೆ ಈ ಅವಕಾಶ ಕಲ್ಪಿಸಿದ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದ. ಅಸಂಖ್ಯಾತ ಕ್ರಿಕೆಟ್‌ ಅಭಿಮಾನಿಗಳು, ಕ್ರಿಕೆಟ್‌ ಬೆಂಬಲಿಗರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಸದಾ ಭಾರತೀಯ ಕ್ರಿಕೆಟ್‌ನ ಹಿತೈಷಿಯಾಗಿರುತ್ತೇನೆ.'