‘‘ನನ್ನ ನಿಲುವು ಅಚಲವಾಗಿದ್ದು, ನೂತನ ಅಧ್ಯಕ್ಷರ ಚುನಾವಣೆ ನಡೆಸುವುದು ಉಚಿತ ಎಂದು ಎಐಟಿಎ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡಲಿದ್ದೇನೆ. ಅಂತೆಯೇ ನನ್ನನ್ನು ಬೆಂಬಲಿಸಿರುವ ಎಲ್ಲ 23 ರಾಜ್ಯ ಸಂಸ್ಥೆಗಳಿಗೂ ಪತ್ರ ಬರೆದು ನನ್ನ ನಿರ್ಧಾರ ತಿಳಿಸಿದ್ದೇನೆ’’- ಅನಿಲ್ ಖನ್ನಾ
ನವದೆಹಲಿ(ನ.03): ಹಿರಿಯ ಕ್ರೀಡಾ ಆಡಳಿತಾಧಿಕಾರಿ ಅನಿಲ್ ಖನ್ನಾ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಸರ್ಕಾರದೊಂದಿಗಿನ ಕಟುವಾದ ನೀತಿಯನ್ನು ಮುಂದುವರೆಸಿದ್ದೇ ಆದಲ್ಲಿ ಆದು ಆಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಾನು ಈ ತೀರ್ಮಾನಕ್ಕೆ ಬಂದಿದ್ದಾಗಿ ಖನ್ನಾ ಹೇಳಿದ್ದಾರೆ.
ಎಐಟಿಎ ಆಜೀವ ಅಧ್ಯಕ್ಷರೂ ಆಗಿರುವ ಖನ್ನಾ, ಇದೇ ಸೆಪ್ಟೆಂಬರ್ 3ರಂದು ಇಂದೋರ್‌ನಲ್ಲಿ ನಡೆದ ಎಐಟಿಎ ವಿಶೇಷ ಸಾಮಾನ್ಯ ಸಭೆಯಲ್ಲಿ 2012-16ರ ಅವಧಿಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರಾದರೂ, ಕ್ರೀಡಾ ಮಸೂದೆಯಲ್ಲಿನ ಕೂಲಿಂಗ್ ಆಫ್ ಅವಧಿಯ ನಿಯಮದಿಂದಾಗಿ ಅಧ್ಯಕ್ಷಗಾದಿಯನ್ನು ಒಲ್ಲೆ ಎಂದಿದ್ದರು.
ಎರಡು ಬಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದುಕೊಂಡು ಅದರ ಬೆನ್ನಲ್ಲೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಕೂಲಿಂಗ್ ಆಫ್ ನಿಯಮದ ಉಲ್ಲಂಘನೆಯಾಗಿದೆ ಎಂದು ಇತ್ತೀಚೆಗಷ್ಟೇ ಎಐಟಿಎ ಅನ್ನು ಕ್ರೀಡಾ ಸಚಿವಾಲಯ ಅಮಾನ್ಯಗೊಳಿಸಿದೆ. ‘‘ನನ್ನ ನಿಲುವು ಅಚಲವಾಗಿದ್ದು, ನೂತನ ಅಧ್ಯಕ್ಷರ ಚುನಾವಣೆ ನಡೆಸುವುದು ಉಚಿತ ಎಂದು ಎಐಟಿಎ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡಲಿದ್ದೇನೆ. ಅಂತೆಯೇ ನನ್ನನ್ನು ಬೆಂಬಲಿಸಿರುವ ಎಲ್ಲ 23 ರಾಜ್ಯ ಸಂಸ್ಥೆಗಳಿಗೂ ಪತ್ರ ಬರೆದು ನನ್ನ ನಿರ್ಧಾರ ತಿಳಿಸಿದ್ದೇನೆ’’ ಎಂದು ಖನ್ನಾ ಹೇಳಿದ್ದಾರೆ.
