ಚಾಣಾಕ್ಷ ಎಂದೇ ಗುರುತಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ದಿಢೀರ್ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ ಎಸ್ ಧೋನಿಯನ್ನ ಭೇಟಿಯಾಗಿದ್ದಾರೆ.  ಅಮಿತ್ ಶಾ ಹಾಗೂ ಧೋನಿ ಭೇಟಿ ಹಿಂದಿನ ಕಾರಣವೇನು? ಇಲ್ಲಿದೆ. 

ದೆಹಲಿ(ಆ.05): ಬಿಜೆಪಿಯ ಸಮರ್ಥನೆಗಾಗಿ ಸಂಪರ್ಕ ಅಭಿಯಾನದಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇಶದ ಪ್ರತಿಷ್ಠಿತ ವ್ಯಕ್ತಿಗಳು, ಗಣ್ಯರು, ಕ್ರೀಡಾಪಟಗಳು ಹಾಗೂ ಸಿನಿಮಾ ತಾರೆಯರನ್ನ ಭೇಟಿಯಾಗಿ ಬಿಜೆಪಿ ಸರ್ಕಾರದ 4 ವರ್ಷದ ಸಾಧನೆಯನ್ನ ಹೇಳೋ ಪ್ರಯತ್ನ ಮಾಡುತ್ತಿದ್ದಾರೆ. 

ಇದೀಗ ಇದೇ ಸಮರ್ಥನೆಗಾಗಿ ಸಂಪರ್ಕ ಅಭಿಯಾನದಡಿ, ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿಯನ್ನ, ಅಮಿತ್ ಶಾ ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ಎಂ ಎಸ್ ಧೋನಿ ಭೇಟಿ ಮಾಡಿದ ಅಮಿತ್ ಶಾ, ನರೇಂದ್ರ ಮೋದಿ ಸರ್ಕಾರದ ಸಾಧನೆಯನ್ನ ವಿವರಿಸಿದರು. 

Scroll to load tweet…

ಅಮಿತ್ ಶಾಗೆ ಕೇಂದ್ರ ಸಚಿವ ಪಿಯೂಷ್ ಗೊಯೆಲ್ ಕೂಡ ಸಾಥ್ ನೀಡಿದರು. ಸ್ವತಃ ಅಮಿತ್ ಶಾ 50ಕ್ಕಿಂತ ಹೆಚ್ಚು ಗಣ್ಯರನ್ನ ಭೇಟಿಯಾಗಿದ್ದಾರೆ. ಮಾಜಿ ಕ್ರಿಕೆಟಿಗ, 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರನ್ನೂ ಸಮರ್ಥನೆಗಾಗಿ ಸಂಪರ್ಕ ಅಭಿಯಾನದಡಿ ಅಮಿತ್ ಶಾ ಭೇಟಿಯಾಗಿದ್ದರು.

ಗಾಯಕಿ ಲತಾ ಮಂಗೇಶ್ಕರ್, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ನಿವೃತ್ತ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಸೇರಿದಂತೆ ಹಲವರನ್ನ ಅಮಿತ್ ಶಾ ಭೇಟಿಯಾಗಿದ್ದಾರೆ.