Commonwealth Games 2022: ದೇಶಕ್ಕೆ ಮೊದಲ ಪದಕ ಗೆದ್ದ ಸಂಕೇತ್ ಸಾಗರ್ ಬೆಂಕಿಯಲ್ಲಿ ಅರಳಿದ ಗುಲಾಬಿ
* ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟ ಸಂಕೇತ್ ಸಾಗರ್
* ಸಂಕೇತ್ ಸಾಗರ್ ಭಾರತದ ಯುವ ವೇಟ್‌ಲಿಫ್ಟರ್
* ಭಾರತದ ಕೀರ್ತಿ ಪತಾಕೆ ಹಾರಿಸಿದ 21 ವರ್ಷದ ಸಂಕೇತ್ ಸಾಗರ್
ಬರ್ಮಿಂಗ್‌ಹ್ಯಾಮ್(ಜು.30): ಸಂಕೇತ್ ಮಹಾದೇವ್ ಸಾಗರ್. ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಪುರುಷರ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರ. 21 ವರ್ಷದ ಮಹಾರಾಷ್ಟ್ರ ಮೂಲದ ವೇಟ್‌ಲಿಫ್ಟರ್ ಬರೋಬ್ಬರಿ 248 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ದೇಶಕ್ಕೆ ಮೊದಲ ಪದಕ ಗೆದ್ದ ಈ ಸಂಕೇತ್ ಸಾಗರ್ ಯಾರು? ಅವರ ಹಿನ್ನೆಲೆ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
55 ಕೆಜಿ ವಿಭಾಗದಲ್ಲಿ ನ್ಯಾಷನಲ್ ಚಾಂಪಿಯನ್ ಆಗಿರುವ ಸಂಕೇತ್ ಸಾಗರ್, ಖೇಲೋ ಇಂಡಿಯಾ ಯೂಥ್ ಗೇಮ್ಸ್ ಹಾಗೂ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ 2020 ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದರು. ಹೀಗಾಗಿ ಸಂಕೇತ್ ಸಾಗರ್ ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದರು. ಸಂಕೇತ್ ಸಾಗರ್, 2022ರ ಫೆಬ್ರವರಿಯಲ್ಲಿ ಸಿಂಗಾಪುರದಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್ಸ್‌ನಲ್ಲಿ (113 ಕೆಜಿ ಸ್ನ್ಯಾಚ್, 143 ಕೆಜಿ ಕ್ಲೀನ್&ಜೆರ್ಕ್) 256 ಕೆಜಿ ಭಾರ ಎತ್ತುವ ಮೂಲಕ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ಹಾಗೂ ನ್ಯಾಷನಲ್ ರೆಕಾರ್ಡ್ ನಿರ್ಮಿಸಿದ್ದರು.
ಸಂಕೇತ್ ಸಾಗರ್ ಬೆಂಕಿಯಲ್ಲಿ ಅರಳಿದ ಹೂವು:
ಸಂಕೇತ್ ಸಾಗರ್ ಕೇವಲ 13 ವರ್ಷದವರಾಗಿದ್ದಾಗಲೇ ವೇಟ್‌ಲಿಫ್ಟಿಂಗ್‌ನತ್ತ ಗಮನ ಹರಿಸಿದರು. ಇದಾದ ಬಳಿಕ ಹಲವು ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಟೂರ್ನಿಗಳಲ್ಲಿ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 2021ರಲ್ಲಿ ನಡೆದ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸಂಕೇತ್ ಸಾಗರ್ ಅವರ ತಂದೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಚಿಕ್ಕದಾದ ಪಾನ್ ಶಾಪ್ ಅಂಗಡಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ.
ಭಾರತದ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಕೋಚ್ ವಿಜಯ್ ಸಾಗರ್ ಅವರ ಗರಡಿಯಲ್ಲಿ ಬೆಳೆದ ನೆಚ್ಚಿನ ವಿದ್ಯಾರ್ಥಿಗಳಲ್ಲಿ ಸಂಕೇತ್ ಸಾಗರ್ ಕೂಡಾ ಒಬ್ಬರೆನಿಸಿದ್ದರು. ಬರ್ಮಿಂಗ್‌ಹ್ಯಾಮ್ ವಾತಾವರಣಕ್ಕೆ ಹೊಂದಿಕೊಳ್ಳಲಿ ಎನ್ನುವ ಉದ್ದೇಶದಿಂದ ಭಾರತ ಸರ್ಕಾರವು ಒಂದು ತಿಂಗಳು ಮುಂಚಿತವಾಗಿಯೇ ವೇಟ್‌ಲಿಫ್ಟರ್‌ಗಳಿಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ವೇಟ್‌ಲಿಫ್ಟಿಂಗ್ ಪೂರ್ವಸಿದ್ದತೆ ಕ್ಯಾಂಪ್ ಆಯೋಜಿಸಿತ್ತು.
Commonwealth Games: ಪದಕದ ಖಾತೆ ತೆರೆದ ಭಾರತ, ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಸಂಕೇತ್ ಸಾಗರ್
ಇದೀಗ ಕಾಮನ್‌ವೆಲ್ತ್ ಪದಕ ವಿಜೇತರಾಗಿರುವ ಸಂಕೇತ್ ಸಾಗರ್, ತಮ್ಮ ಕುಟುಂಬವನ್ನು ಬಡತನದ ಬೇಗೆಯಿಂದ ಪಾರು ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಭಾರತದ ಯುವ ವೇಟ್‌ಲಿಫ್ಟರ್ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಸರನ್ನು ಮಿನುಗುವಂತೆ ಮಾಡುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಇದಷ್ಟೇ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ.