ಕೋಲ್ಕತಾ[ಮಾ.27]: ಬ್ಯಾಟ್ಸ್’ಮನ್’ಗಳ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಬೌಲರ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ 28 ರನ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 

ಕೆಕೆಆರ್ ನೀಡಿದ್ದ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಆರಂಭದಲ್ಲೇ ರಾಹುಲ್ ವಿಕೆಟ್ ಕಳೆದುಕೊಂಡಿತು. ಇನ್ನು ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಗೇಲ್ ಆಟ ಕೇವಲ 20 ರನ್’ಗಳಿಗೆ ಸೀಮಿತವಾಯಿತು. ಆ ಬಳಿಕ ಮಯಾಂಕ್ ಅಗರ್’ವಾಲ್-ಸರ್ಫರಾಜ್ ಖಾನ್[23] ಅಲ್ಪ ಹೋರಾಟ ನಡೆಸಿದರಾದರೂ ರಸೆಲ್ ಈ ಜೋಡಿಯನ್ನು ಹೆಚ್ಚುಹೊತ್ತು ಕ್ರೀಸ್’ನಲ್ಲಿ ನೆಲೆಯೂರಲು ಬಿಡಲಿಲ್ಲ. ಆದರೆ ನಾಲ್ಕನೇ ವಿಕೆಟ್’ಗೆ ಮಯಾಂಕ್ ಜತೆಯಾದ ಮಿಲ್ಲರ್ 74 ರನ್’ಗಳ ಜತೆಯಾಟವಾಡುವ ಮೂಲಕ ಪಂಜಾಬ್’ಗೆ ಗೆಲುವಿನ ಆಸೆ ಮೂಡಿಸಿದರು. ಕೇವಲ 34 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 58 ರನ್ ಬಾರಿಸಿ ಚಾವ್ಲಾಗೆ ವಿಕೆಟ್ ಒಪ್ಪಿಸಿದರು. ಆ ಬಳಿಕವೂ ಮಿಲ್ಲರ್[59] ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಮನ್ದೀಪ್ ಸಿಂಗ್[33] ಜತೆ ಹೋರಾಟ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.  

ಉತ್ತಪ್ಪ, ರಾಣಾ, ರಸೆಲ್ ಅಬ್ಬರ: ಪಂಜಾಬ್’ಗೆ ಸವಾಲಿನ ಗುರಿ ನೀಡಿದ ಕೆಕೆಆರ್

ಇದಕ್ಕೂ ಮೊದಲು ಕನ್ನಡಿಗ ರಾಬಿನ್ ಉತ್ತಪ್ಪ, ನಿತಿಶ್ ರಾಣಾ ಭರ್ಜರಿ ಅರ್ಧಶತಕ ಹಾಗೂ ಆ್ಯಂಡ್ರೆ ರಸೆಲ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 218 ರನ್ ಕಲೆಹಾಕಿತ್ತು.

ಸಂಕ್ಷಿಪ್ತ ಸ್ಕೋರ್
ಕೆಕೆಆರ್: 218/4
ಪಂಜಾಬ್: 190
ಫಲಿತಾಂಶ: ಕೋಲ್ಕತಾಗೆ 28 ರನ್’ಗಳ ಜಯ