ಸೌತಾಂಪ್ಟನ್(ಸೆ.03): ಇಂಗ್ಲೆಂಡ್ ಹಿರಿಯ ಬ್ಯಾಟ್ಸ್‌ಮನ್ ಅಲಿಸ್ಟೈರ್ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಭಾರತ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಬಳಿಕ ಕುಕ್ ತಮ್ಮ ಕ್ರಿಕೆಟ್ ಕರಿಯರ್‌ಗೆ ವಿದಾಯ ಹೇಳಲಿದ್ದಾರೆ.

ಸಚಿನ್ ತೆಂಡೂಲ್ಕರ್ ದಾಖಲೆ ಹಿಂದಿಕ್ಕಿ ಶೂರ ಎಂದೇ ಬಿಂಬಿತವಾಗಿದ್ದ ಕುಕ್ ಇದೀಗ ಅರ್ಧಕ್ಕೆ ಆಟ ನಿಲ್ಲಿಸಿ ಹೊರನಡೆದಿದ್ದಾರೆ. ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 15,921 ರನ್ ಸಿಡಿಸೋ ಮೂಲಕ ಗರಿಷ್ಠ ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ. 

ಆಲಿಸ್ಟೈರ್ ಕುಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 12,000 ರನ್ ಪೂರೈಸುತ್ತಿದ್ದಂತೆ, ಸಚಿನ್ ದಾಖಲೆ ಪುಡಿ ಮಾಡಬಲ್ಲ ಕ್ರಿಕೆಟಿಗ ಎಂದೇ ಹೇಳಲಾಗುತ್ತಿತ್ತು. ಇಂಗ್ಲೆಂಡ್ ಮಾಧ್ಯಮಗಳು ಸಚಿನ್ ತೆಂಡೂಲ್ಕರ್ ಗರಿಷ್ಠ ರನ್  ದಾಖಲೆ ಪುಡಿ ಮಾಡಬಲ್ಲ ಎಕೈಕ ಕ್ರಿಕೆಟಿಗ ಎಂದಿತ್ತು. ಆದರೆ ಕುಕ್ 12,254 ರನ್‌ಗಳಿಗೆ ಆಟ ನಿಲ್ಲಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ರೀತಿ 24 ವರ್ಷಗಳ ಸುದೀರ್ಘ ಕರಿಯರ್‌ನಲ್ಲಿ ಹಲವು ದಾಖಲೆ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಸಚಿನ್ ನಂತರ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್, ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಜ್ಯಾಕ್ ಕಾಲಿಸ್, ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್, ಶ್ರೀಲಂಕ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಹಾಗೂ  ಅಲಿಸ್ಟೈರ್ ಕುಕ್ 6ನೇ ಸ್ಥಾನ ಪಡೆದಿದ್ದರು. 

ತೆಂಡೂಲ್ಕರ್ ನಂತ್ರದ ಸ್ಥಾನದಲ್ಲಿದ್ದ ನಾಲ್ವರು ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 6ನೇ ಸ್ಥಾನದಲ್ಲಿದ್ದ ಕುಕ್ ಮಾತ್ರ ಟೆಸ್ಟ್ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರು. ಹೀಗಾಗಿ ಕುಕ್ ಸಚಿನ್ ದಾಖಲೆ ಪುಡಿ ಮಾಡಬಲ್ಲರು ಎನ್ನಲಾಗುತ್ತಿತ್ತು. ಆದರೆ ಸಚಿನ್ ದಾಖಲೆ ಮುರಿಯುವುದು ಅಷ್ಟು ಸುಲಭವಲ್ಲ.