ಸೌತಾಂಪ್ಟನ್(ಸೆ.03): ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ಹಿರಿಯ ಬ್ಯಾಟ್ಸ್‌ಮನ್ ಅಲಿಸ್ಟೈರ್ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.  ಭಾರತ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಕುಕ್ ವಿದಾಯದ ಪಂದ್ಯವಾಗಲಿದೆ.

ಭಾರತ ವಿರುದ್ಧದ ಆರಂಭಿಕ 4 ಪಂದ್ಯದ 7 ಇನ್ನಿಂಗ್ಸ್‌ಗಳಲ್ಲಿ ಕುಕ್ 109 ರನ್ ಸಿಡಿಸಿದ್ದಾರೆ. ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಕುಕ್ ಈ ಸರಣಿಯಲ್ಲಿ ಗರಿಷ್ಠ ಸ್ಕೋರ್ 29. ಕುಕ್ ಬ್ಯಾಟಿಂಗ್ ಸರಾಸರಿ 15.57 . ಕುಕ್ ದಿಢೀರ್ ನಿವೃತ್ತಿಗೆ  ಸತತ ವೈಫಲ್ಯವೇ ಪ್ರಮುಖ ಕಾರಣ.

ಇಂಗ್ಲೆಂಡ್ ತಂಡದ ನಾಯಕನಾಗಿ ತಂಡವನ್ನ ಮುನ್ನಡೆಸಿದ ಕುಕ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. 160 ಟೆಸ್ಟ್ ಪಂದ್ಯಗಳಲ್ಲಿ ಕುಕ್, 12,254 ರನ್ ಸಿಡಿಸಿದ್ದಾರೆ. ಇಷ್ಟೇ ಅಲ್ಲ 32 ಶತಕ ಕೂಡ ಸಿಡಿಸಿದ್ದಾರೆ. 

ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ವಿಶ್ವ ಕ್ರಿಕೆಟಿಗರ ಪೈಕಿ ಅಲಿಸ್ಟೈರ್ ಕುಕ್ 6ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಪರ ಗರಿಷ್ಠ ರನ್ ಸಿಡಿಸಿದ ಟೆಸ್ಟ್ ಆಟಗಾರ ಅನ್ನೋ ಹೆಗ್ಗಳಿಕೆಗೂ ಕುಕ್ ಪಾತ್ರರಾಗಿದ್ದಾರೆ. 

ಟೆಸ್ಟ್ ಕ್ರಿಕೆಟ್‌ನಲ್ಲಿ 32 ಸೆಂಚುರಿ ಸಿಡಿಸೋ ಮೂಲಕ ಇಂಗ್ಲೆಂಡ್ ಪರ ಗರಿಷ್ಠ ಶತಕ ಸಿಡಿಸಿದ ಟೆಸ್ಟ್ ಆಟಗಾರನಾಗಿದ್ದಾರೆ. 59 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸೋ ಮೂಲಕ ಕುಕ್, ಗರಿಷ್ಠ ಬಾರಿ ಇಂಗ್ಲೆಂಡ್ ತಂಡವನ್ನ ಮುನ್ನಡೆಸಿದ ನಾಯಕ ಅನ್ನೋ ದಾಖಲೆ ಬರೆದಿದ್ದಾರೆ.

2018ರ ಸಾಲಿನಲ್ಲಿ ಅಲಿಸ್ಟೈರ್ ಕುಕ್ ಕ್ರಿಕೆಟ್ ಕರಿಯರ್‌ನ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ ಕುಕ್ ಬ್ಯಾಟಿಂಗ್ ಸರಾಸರಿ 18.62. ಹೀಗಾಗಿ ಸತತ ಟೀಕೆ ಎದುರಿಸಿದರು.

4ನೇ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಅಲಿಸ್ಟೈರ್ ಕುಕ್ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಭಾರತ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ವಿದಾಯ ಹೇಳಲಿದ್ದಾರೆ.